ವಿಟ್ಲದಲ್ಲಿ ಭೀಕರ ಅಗ್ನಿ ಅವಘಡ: ಎಲೆಕ್ಟ್ರಾನಿಕ್ಸ್ ಅಂಗಡಿ ಬೆಂಕಿಗೆ ಆಹುತಿ - ಪಕ್ಕದ ಅಂಗಡಿಗಳಿಗೂ ವ್ಯಾಪಿಸಿದ ಜ್ವಾಲೆ!
- sathyapathanewsplu
- Dec 31, 2025
- 1 min read

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೇಟೆಯ ಮಂಗಳೂರು ರಸ್ತೆಯಲ್ಲಿರುವ 'ಶ್ರೀ ಎಲೆಕ್ಟ್ರಾನಿಕ್ಸ್' ಅಂಗಡಿಯಲ್ಲಿ ಇಂದು ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಗಣೇಶ್ ಡ್ರೈವಿಂಗ್ ಸ್ಕೂಲ್ ಪಕ್ಕದಲ್ಲಿರುವ ಈ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯ ತೀವ್ರತೆಗೆ ಅಂಗಡಿಯೊಳಗಿನಿಂದ ಸ್ಫೋಟದ ಸದ್ದುಗಳು ಕೇಳಿಬರುತ್ತಿದ್ದು, ಇಡೀ ಪರಿಸರದಲ್ಲಿ ದಟ್ಟವಾದ ಹೊಗೆ ಆವರಿಸಿದೆ. ಸ್ಥಳೀಯರು ನೀರು ಮತ್ತು ಮರಳನ್ನು ಎಸೆದು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ, ಜ್ವಾಲೆಯ ಅಬ್ಬರ ಕಡಿಮೆಯಾಗದೆ ಭೀತಿ ಸೃಷ್ಟಿಸಿದೆ.
ಬೆಂಕಿಯ ಜ್ವಾಲೆಯು ಶ್ರೀ ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ ಪಕ್ಕದ ಟೈಲರ್ ಶಾಪ್‌ಗೂ ವ್ಯಾಪಿಸಿದ್ದು, ಸುತ್ತಮುತ್ತಲಿನ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳದ ಸಮೀಪದಲ್ಲೇ ಅಮಿತ್ ಹೋಟೆಲ್ ಹಾಗೂ ಫಾಸ್ಟ್ ಫುಡ್ ಅಂಗಡಿಗಳಿರುವುದರಿಂದ ಬೆಂಕಿ ಮತ್ತಷ್ಟು ಹರಡುವ ಅಪಾಯ ಎದುರಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಶ್ರಮಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲಿನ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಜನಸಂದಣಿ ಹೆಚ್ಚಾಗಿರುವುದರಿಂದ ಸಂಚಾರ ವ್ಯವಸ್ಥೆಯಲ್ಲೂ ಅಲ್ಪಕಾಲ ವ್ಯತ್ಯಯ ಉಂಟಾಗಿದೆ.
ಈ ಘಟನೆಯು ವಿಟ್ಲದಲ್ಲಿ ಅಗ್ನಿಶಾಮಕ ದಳದ ಕಚೇರಿ ಇಲ್ಲದಿರುವುದನ್ನು ಮತ್ತೊಮ್ಮೆ ನೆನಪಿಸಿದೆ. ವಿಟ್ಲದಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ಪುತ್ತೂರು ಅಥವಾ ಬಿ.ಸಿ. ರೋಡ್‌ನಿಂದಲೇ ಅಗ್ನಿಶಾಮಕ ದಳ ಆಗಮಿಸಬೇಕಾದ ಅನಿವಾರ್ಯತೆ ಇದೆ. ಈ ವರದಿ ಸಿದ್ಧವಾಗುವ ಹೊತ್ತಿಗೆ ಅಗ್ನಿಶಾಮಕ ವಾಹನ ಇನ್ನೂ ಸ್ಥಳಕ್ಕೆ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ, ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ವಿಟ್ಲದಲ್ಲೇ ಶಾಶ್ವತ ಅಗ್ನಿಶಾಮಕ ಕೇಂದ್ರ ಸ್ಥಾಪಿಸಬೇಕೆಂಬ ಸಾರ್ವಜನಿಕರ ಹಳೆಯ ಬೇಡಿಕೆ ಈಗ ಮತ್ತೆ ಬಲವಾಗಿ ಕೇಳಿಬರುತ್ತಿದೆ.






Comments