ಪುತ್ತೂರು ಮಗು ಡೆಲಿವರಿ ಪ್ರಕರಣ: ಸಂಧಾನ ವಿಫಲ, ಶೀಘ್ರವೇ ಅಸಲಿ ಮುಖವಾಡ ಬಯಲು- ಕೆ.ಪಿ. ನಂಜುಂಡಿ

ಮಂಗಳೂರು: ಪುತ್ತೂರಿನ ಮಗು ಡೆಲಿವರಿ ಪ್ರಕರಣದಲ್ಲಿ ಡಿಎನ್‌ಎ ವರದಿ ಪಾಸಿಟಿವ್ ಬಂದಿದ್ದರೂ ಸಹ ಆರೋಪಿ ಶ್ರೀಕೃಷ್ಣನ ಕುಟುಂಬದವರು ಒಪ್ಪಿಕೊಳ್ಳಲು ಅಸಾಧ್ಯವಾದ ಮತ್ತು ಕಠಿಣವಾದ ಷರತ್ತುಗಳನ್ನು ವಿಧಿಸುವ ಮೂಲಕ ಸಂಧಾನ ಪ್ರಕ್ರಿಯೆಯನ್ನು ಹಳಿ ತಪ್ಪಿಸಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬದೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಹಿರಿಯ ವಕೀಲರೊಂದಿಗೆ ಚರ್ಚಿಸಿದ ನಂತರ ಆರೋಪಿಗಳು ವಿಧಿಸಿರುವ ಅಸಂಗತ ಷರತ್ತುಗಳನ್ನು ದಾಖಲೆ ಸಮೇತ ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಎಚ್ಚರಿಸಿದರು.
ಡಿಎನ್‌ಎ ಪರೀಕ್ಷಾ ವರದಿ ಬರಲು ಮೂರು ತಿಂಗಳ ಕಾಲಾವಕಾಶ ಹಿಡಿದಿದ್ದರಿಂದ ಮತ್ತು ಪ್ರಕರಣ ನ್ಯಾಯಾಲಯದಲ್ಲಿ ಇದ್ದ ಕಾರಣದಿಂದ ತಾವು ಮೌನ ವಹಿಸಬೇಕಾಯಿತು ಎಂದು ಸ್ಪಷ್ಟಪಡಿಸಿದ ನಂಜುಂಡಿ, ಈ ಅವಧಿಯಲ್ಲಿ ತಮ್ಮ ಮೇಲೆ ಕೇಳಿಬಂದ 'ರಾಜಿ' ಆರೋಪಗಳನ್ನು ತಳ್ಳಿಹಾಕಿದರು. ತಾವು ಹಣಕ್ಕೆ ಬಗ್ಗುವವರಲ್ಲ ಮತ್ತು ಪ್ರಚಾರಕ್ಕಾಗಿ ಈ ಹೋರಾಟ ಮಾಡುತ್ತಿಲ್ಲ ಎಂದು ಹೇಳಿದ ಅವರು, ಕಲ್ಲಡ್ಕ ಪ್ರಭಾಕರ ಭಟ್, ನಳಿನ್ ಕುಮಾರ್ ಕಟೀಲ್ ಮತ್ತು ಸತೀಶ್ ಕುಂಪಲ ಅವರಂತಹ ಪ್ರಭಾವಿ ನಾಯಕರ ಸಮ್ಮುಖದಲ್ಲಿ ಸಂಧಾನಕ್ಕೆ ಪ್ರಯತ್ನಿಸಲಾಗಿದ್ದರೂ, ಎದುರಾಳಿಗಳ ಹಠಮಾರಿ ಧೋರಣೆಯಿಂದಾಗಿ ರಾಜಿ ಮಾತುಕತೆ ಈಗ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದರು.
ಪುತ್ತೂರನ್ನು ಹಿಂದುತ್ವದ ಕಲಶ ಎಂದು ಬಣ್ಣಿಸಿದ ನಂಜುಂಡಿ, ವಿಶ್ವಕರ್ಮ ಸಮುದಾಯವು ಹಿಂದುತ್ವದ ಮೌಲ್ಯಗಳನ್ನು ಪಾಲಿಸಿಕೊಂಡು ಬರುತ್ತಿದೆ, ಆದರೆ ನಮ್ಮ ಸಮಾಜದ ಹೆಣ್ಣುಮಗುವಿಗೆ ಅನ್ಯಾಯವಾದಾಗ ರಕ್ಷಣೆಗೆ ಯಾರೂ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮದು ಸಣ್ಣ ಸಮುದಾಯವಾದರೂ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು, ಸಂತ್ರಸ್ತೆಗೆ ನ್ಯಾಯ ಕೊಡಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಗುಡುಗಿದರು.







Comments