ಪುತ್ತೂರು: ಆನ್ ಲೈನ್ ಮೂಲಕ ವಂಚಿಸುತ್ತಿದ್ದಾತ ಅರೆಸ್ಟ್
- 1 day ago
- 1 min read

ಪುತ್ತೂರು: ಆನ್‌ಲೈನ್ ಮೂಲಕ 2.37 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮೂಲತಃ ಮಹಾರಾಷ್ಟ್ರದವನಾಗಿದ್ದು, ಸದ್ಯ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯಲ್ಲಿ ವಾಸವಿರುವ ಅವಿನಾಶ್ ರಮೇಶ್ ಗೌಡ (24) ಎಂದು ಗುರುತಿಸಲಾಗಿದೆ.
ಪುತ್ತೂರಿನ ಯಶೋಧರ ಎಂಬವರು ನೀಡಿದ ದೂರಿನ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬನು ವಿಮಾ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡಿ ಹೊಸ ವಿಮಾ ಪಾಲಿಸಿ ಖರೀದಿಸಲು ಹಾಗೂ ಪ್ರೀಮಿಯಂ ಪಾವತಿಸಲು ಒತ್ತಾಯಿಸಿದ್ದ. ಆಫರ್‌ನ್ನು ತಿರಸ್ಕರಿಸಿದ ಬಳಿಕ, ಚಾಲ್ತಿಯಲ್ಲಿರುವ ವಿಮಾ ಪ್ರಕ್ರಿಯೆಯನ್ನು ರದ್ದುಗೊಳಿಸಲು ಸಹಾಯ ಮಾಡುವುದಾಗಿ ನಂಬಿಸಿ ಮಾತುಕತೆ ಮುಂದುವರೆಸಿದ್ದಾನೆ.
ಈ ನೆಪದಲ್ಲಿ ವಂಚಕನು ದೂರುದಾರರ ಕ್ರೆಡಿಟ್ ಕಾರ್ಡ್ ವಿವರಗಳು ಹಾಗೂ ಒಟಿಪಿ (OTP) ಪಡೆದುಕೊಂಡಿದ್ದ. ಬಳಿಕ ಆ ಗೌಪ್ಯ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು, ದೂರುದಾರರ ಕ್ರೆಡಿಟ್ ಕಾರ್ಡ್‌ನಿಂದ ₹2,37,036 ಅನ್ನು ಅಕ್ರಮವಾಗಿ ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.
ದೂರುದಾರರ ಮಾಹಿತಿಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318(4), 319(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತೀವ್ರ ತನಿಖೆ ನಡೆಸಿದ ಪೊಲೀಸ್ ತಂಡ ಫೆಬ್ರವರಿ 11ರಂದು ಆರೋಪಿಯನ್ನು ಬಂಧಿಸಿದ್ದು, ಮುಂದಿನ ವಿಚಾರಣೆ ಮುಂದುವರಿದಿದೆ.
ಸೈಬರ್ ಪೊಲೀಸರ ಎಚ್ಚರಿಕೆ:
ಅಪರಿಚಿತರಿಂದ ಬರುವ ಕರೆಗಳಿಗೆ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು, ಸಿವಿವಿ, ಒಟಿಪಿ ಮುಂತಾದ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.






Comments