ಮಂಗಳೂರು–ಸುಬ್ರಹ್ಮಣ್ಯ ಮಾರ್ಗಕ್ಕೆ MEMU ರೈಲು ಬೇಡಿಕೆ: ಸಚಿವ ಸೋಮಣ್ಣಗೆ ಮನವಿ, ಸಂಸದ ಬ್ರಿಜೇಶ್ ಚೌಟ ಬೆಂಬಲ
- May 23
- 1 min read

ಮಂಗಳೂರು, ಮೇ 23:
ಮಂಗಳೂರು ಜಂಕ್ಷನ್‌ನಲ್ಲಿ ನಡೆದ ಅಮೃತ ಭಾರತ್ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ, ಮಂಗಳೂರು–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲನ್ನು MEMU (ಮೆಮು) ರೈಲಿಗೆ ಮೇಲ್ದರ್ಜೆಗೇರಿಸುವಂತೆ ಮಹತ್ವದ ಬೇಡಿಕೆ ಮುಂದಿರಿಸಲಾಯಿತು.
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು. ಈ ಬೇಡಿಕೆಗೆ ಸ್ಥಳೀಯ ಸಂಸದರು ಸಹ ಬೆಂಬಲ ಸೂಚಿಸಿದ್ದು, ಶೀಘ್ರದಲ್ಲೇ ಸಕಾರಾತ್ಮಕ ಸ್ಪಂದನೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವೇಗವಾದ ಹಾಗೂ ಹೆಚ್ಚು ಆವೃತ್ತಿಯ ರೈಲು ಸೇವೆ ಒದಗಿಸುವ ದೃಷ್ಟಿಯಿಂದ MEMU ರೈಲು ಬಹಳ ಉಪಯುಕ್ತವಾಗಲಿದೆ. ಇದರಿಂದ ದಿನನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಸಭೆಯ ಸಂದರ್ಭದಲ್ಲಿ ಸಚಿವರ ಗಮನಕ್ಕೆ ಹಲವು ಪ್ರಮುಖ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ತರಲಾಯಿತು. ಕಳೆದ ಆರು ತಿಂಗಳಿನಿಂದ ಪ್ರತಿದಿನ ವಿಳಂಬವಾಗಿ ಆಗಮಿಸುತ್ತಿರುವ ಬೆಂಗಳೂರು–ಕೋಜಿಕೋಡ್ ಎಕ್ಸ್ಪ್ರೆಸ್ ರೈಲಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕೆಂದು ಒತ್ತಾಯಿಸಲಾಯಿತು.
ಇದರ ಜೊತೆಗೆ, ಪ್ರಸ್ತಾವಿತ ಬೆಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭಿಸಿದರೂ, ಈಗ ಸಂಚರಿಸುತ್ತಿರುವ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಮನವಿ ಮಾಡಲಾಯಿತು. ಮಂಗಳೂರು–ಬೆಂಗಳೂರು ನಡುವೆ ಈಗಿನ ರೈಲುಗಳ ವೇಳಾಪಟ್ಟಿಯನ್ನು ಸ್ಥಿರವಾಗಿಡಬೇಕೆಂಬ ಬೇಡಿಕೆಯೂ ಮುಂದಿರಿಸಲಾಯಿತು.
ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವುದು ಹಾಗೂ ಮತ್ಸಗಂಧಾ ಎಕ್ಸ್ಪ್ರೆಸ್ ರೈಲಿಗೆ ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆ ನೀಡುವಂತೆ ಒತ್ತಾಯಿಸಲಾಯಿತು. ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಡುವಿನ ಹಳಿ ಡಬ್ಲಿಂಗ್ ಕಾರ್ಯವನ್ನು ಶೀಘ್ರ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಇದರ ಜೊತೆಗೆ, ಮಂಗಳೂರು–ಸುಬ್ರಹ್ಮಣ್ಯ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲಿನ ಬದಲು MEMU ರೈಲು ಆರಂಭಿಸುವುದು, ಬೆಂಗಳೂರು–ಕೋಜಿಕೋಡ್ ಎಕ್ಸ್ಪ್ರೆಸ್ ರೈಲಿಗೆ ‘ರಾಣಿ ಅಬ್ಬಕ್ಕ’ ಎಂಬ ಹೆಸರನ್ನು ನೀಡುವುದು ಹಾಗೂ ಪಾಂಡೇಶ್ವರ ಪ್ರದೇಶದ ಲೆವೆಲ್ ಕ್ರಾಸಿಂಗ್‌ಗೆ ಮೇಲ್ಸೇತುವೆ ನಿರ್ಮಿಸುವಂತೆ ಮನವಿ ಮಾಡಲಾಯಿತು.
ಈ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಲಾಗಿದೆ.
(ಕೃಪೆ : ದ. ಕ ಗ್ರಾಮೀಣ ರೈಲು ಬಳಕೆದಾರರು ವಾಟ್ಸಪ್ ಗ್ರೂಪ್ )







Comments