
ಕಡಬ: ಕಾಡಾನೆ ಎದುರಾದಾಗ ಬೈಕ್ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡ ಸವಾರ - ಆನೆ ದಾಳಿಗೆ ಬೈಕ್ ನಜ್ಜುಗುಜ್ಜು
- sathyapathanewsplu
- Jan 24
- 1 min read

ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುಬ್ರಹ್ಮಣ್ಯ ವಲಯದ ಕೊಂಬಾರು ಗ್ರಾಮದ ಕಾಯರ್ತಡ್ಕ–ಮಣಿಭಾಂಡ ರಸ್ತೆಯಲ್ಲಿ ಗುರುವಾರ ರಾತ್ರಿ ರಸ್ತೆ ಮಧ್ಯೆ ಕಾಡಾನೆ ಎದುರಾದ ಪರಿಣಾಮ ಬೈಕ್ ಸವಾರೊಬ್ಬರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಂಭವಿಸಿದೆ.
ಸ್ಥಳೀಯ ಅಗರಿ ನಿವಾಸಿ ವಿನಯ್ ಎಂಬವರು ಗುರುವಾರ ರಾತ್ರಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಅಚಾನಕ್ ಕಾಡಾನೆ ಎದುರಾಗಿದೆ. ಗಾಬರಿಗೊಂಡ ಅವರು ತಕ್ಷಣ ಬೈಕ್ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ವೇಳೆ ಆನೆಯು ರಸ್ತೆಯಲ್ಲಿದ್ದ ಬೈಕ್ ಅನ್ನು ತುಳಿದು ಗಂಭೀರವಾಗಿ ಹಾನಿಗೊಳಿಸಿದೆ.
ಘಟನೆಯ ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬಂದಿ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸವಾರರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ವಿಮಲ್ ಬಾಬು ಅವರು, “ಇದು ಒಂಟಿ ಆನೆಯಾಗಿದ್ದು, ಅದರ ಚಲನವಲನವನ್ನು ಇಲಾಖೆ ನಿಕಟವಾಗಿ ಗಮನಿಸುತ್ತಿದೆ. ಬೈಕ್‌ಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಧನ ನೀಡುವ ಸಲುವಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ನಿಯಮಾನುಸಾರ ಸುಮಾರು 20 ಸಾವಿರ ರೂ. ಪರಿಹಾರ ನೀಡಲು ಅವಕಾಶವಿದೆ,” ಎಂದು ಮಾಹಿತಿ ನೀಡಿದ್ದಾರೆ.
ಅದೇ ವೇಳೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಅವರು, “ಆನೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಾಡು ಪ್ರದೇಶದ ರಸ್ತೆಗಳ ಮೂಲಕ ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಸಂಚರಿಸುವುದನ್ನು ತಪ್ಪಿಸಬೇಕು. ಸಾರ್ವಜನಿಕರ ಸುರಕ್ಷತೆಗಾಗಿ ನಮ್ಮ ಸಿಬ್ಬಂದಿ ಹಗಲು-ರಾತ್ರಿ ಗಸ್ತು ತಿರುಗುತ್ತಿದ್ದು, ಆನೆಯ ಚಲನವಲನವನ್ನು ಅವಲೋಕಿಸುತ್ತಿದ್ದಾರೆ,” ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೊಂಬಾರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಶಾಶ್ವತ ನಿಯಂತ್ರಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






Comments