ವಿದೇಶಿ ಪ್ರವಾಸಿಗರೊಂದಿಗೆ ಬಲವಂತದ ಸೆಲ್ಫಿ ತಗೊಂಡ್ರೆ ಜೈಲು ಫಿಕ್ಸ್: ಗೋವಾ ಪೊಲೀಸರ ಖಡಕ್ ಎಚ್ಚರಿಕೆ!

ಗೋವಾ ರಾಜ್ಯದ ಕಡಲತೀರಗಳಲ್ಲಿ ವಿದೇಶಿ ಪ್ರಜೆಗಳಿಗೆ ಕಿರುಕುಳ ನೀಡುವ ದೇಶಿ ಪ್ರವಾಸಿಗರ ವಿರುದ್ಧ ಗೋವಾ ಪೊಲೀಸರು ಈಗ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಬೀಚ್‌ಗಳಲ್ಲಿ ವಿದೇಶಿಯರ ಒಪ್ಪಿಗೆಯಿಲ್ಲದೆ ಅವರ ಫೋಟೋ ತೆಗೆಯುವುದು ಅಥವಾ ಬಲವಂತವಾಗಿ ಸೆಲ್ಫಿಗಾಗಿ ಒತ್ತಾಯಿಸುವುದು ಕಂಡುಬಂದರೆ ಅಂತಹವರನ್ನು ಸ್ಥಳದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಎಚ್ಚರಿಸಿದ್ದಾರೆ. ದೇಶೀಯ ಪ್ರವಾಸಿಗರು ವಿದೇಶಿ ಮಹಿಳೆಯರ ಚಿತ್ರಗಳನ್ನು ಕ್ಲಿಕ್ಕಿಸಿ ಕಿರಿಕಿರಿ ಉಂಟುಮಾಡುತ್ತಿರುವ ಹಲವಾರು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇತ್ತೀಚೆಗೆ ಉತ್ತರ ಗೋವಾದ ಕ್ಯಾಲಂಗುಟ್ ಬೀಚ್‌ನಲ್ಲಿ ರಷ್ಯಾದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಒಡಿಶಾ ಮೂಲದ ಆಕಾಶ್ ಮಿನಾಜ್(19) ಮತ್ತು ಧಯಾನ್ ಟಪ್ಪೊ(34) ಎಂಬ ಇಬ್ಬರು ಪ್ರವಾಸಿಗರನ್ನು ಬಂಧಿಸಲಾಗಿದೆ. ಆರೋಪಿಗಳು ವಿದೇಶಿ ಪ್ರವಾಸಿಗರೊಂದಿಗೆ ಬಲವಂತವಾಗಿ ಫೋಟೋ ಕ್ಲಿಕ್ಕಿಸಿದ್ದಲ್ಲದೆ, ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಘಟನೆಗಳು ಪ್ರವಾಸೋದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದರಿಂದ ಪೊಲೀಸ್ ಇಲಾಖೆಯು ಕಣ್ಗಾವಲು ಹೆಚ್ಚಿಸಿದೆ.
ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗೋವಾ ಪೊಲೀಸರು ಕಡಲತೀರಗಳಲ್ಲಿ ಗಸ್ತನ್ನು ಚುರುಕುಗೊಳಿಸಿದ್ದಾರೆ. ವಿದೇಶಿ ಮಹಿಳೆಯರ ಅನುಮತಿಯಿಲ್ಲದೆ ಅವರ ಛಾಯಾಚಿತ್ರಗಳನ್ನು ತೆಗೆಯುವುದು ಅಥವಾ ಸೆಲ್ಫಿಗಾಗಿ ಪೀಡಿಸುವುದು ಗಂಭೀರ ಅಪರಾಧವೆಂದು ಪರಿಗಣಿಸಲಾಗುವುದು. ಪ್ರವಾಸಿಗರು ಸಭ್ಯತೆಯಿಂದ ನಡೆದುಕೊಳ್ಳಬೇಕು ಮತ್ತು ಇತರರ ಖಾಸಗಿತನವನ್ನು ಗೌರವಿಸಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.







Comments