ಪುತ್ತೂರಿಗೆ ಸಿಕ್ಕಿತು ವೈದ್ಯಕೀಯ ಕಾಲೇಜು ಭಾಗ್ಯ: ₹549.79 ಕೋಟಿ ಅನುದಾನಕ್ಕೆ ಸಚಿವ ಸಂಪುಟದ ಐತಿಹಾಸಿಕ ಅಂಕಿತ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಜನತೆಯ ಬಹುದಿನಗಳ ಕನಸಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕೊನೆಗೂ ಅಧಿಕೃತ ಅನುಮೋದನೆ ದೊರೆತಿದೆ. ಮಂಗಳೂರಿನ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪುತ್ತೂರಿನಲ್ಲಿ ನೂತನ ವೈದ್ಯಕೀಯ ಕಾಲೇಜು ಹಾಗೂ ಬೋಧನಾ ಆಸ್ಪತ್ರೆ ನಿರ್ಮಾಣಕ್ಕಾಗಿ ₹549.79 ಕೋಟಿ ನೀಡಲು ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ.
2025–26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಈ ಯೋಜನೆಗೆ ಈಗ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಂತಾಗಿದೆ. ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಸೊಡಿಯಾಪು ಬಳಿ ಗುರುತಿಸಲಾದ ಜಾಗದಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜು, ಬೋಧನಾ ಆಸ್ಪತ್ರೆ, ವಿದ್ಯಾರ್ಥಿಗಳ ವಸತಿನಿಲಯ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು. 'ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು' ಯೋಜನೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಸ್ಥಳೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಲಭ್ಯವಾಗುವುದರ ಜೊತೆಗೆ ಬಡ ರೋಗಿಗಳಿಗೆ ಉನ್ನತ ದರ್ಜೆಯ ಉಚಿತ ಆರೋಗ್ಯ ಸೇವೆ ದೊರೆಯಲಿದೆ.
ಇದೇ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು 'ಮಂಗಳೂರು' ಎಂದು ಮರುನಾಮಕರಣ ಮಾಡುವ ಸಂಬಂಧ ಸಾರ್ವಜನಿಕರ ಆಕ್ಷೇಪಣೆ ಹಾಗೂ ಅಭಿಪ್ರಾಯ ಆಹ್ವಾನಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಅಧಿಸೂಚನೆ ಹೊರಡಿಸಲು ಸಂಪುಟ ತೀರ್ಮಾನಿಸಿದೆ.







Comments