ದಕ್ಷಿಣ ಕನ್ನಡ ಜಿಲ್ಲೆ 'ಮಂಗಳೂರು' ಆಗಿ ಮರುನಾಮಕರಣ? ಸಚಿವ ಸಂಪುಟದಲ್ಲಿ ಚರ್ಚೆ, ಸಾರ್ವಜನಿಕರ ಅಭಿಪ್ರಾಯಕ್ಕೆ ಸಿಎಂ ನಿರ್ಧಾರ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡಬೇಕೆಂಬ ದಶಕಗಳ ಹಳೆಯ ಬೇಡಿಕೆಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ.
ದಕ್ಷಿಣ ಕನ್ನಡ ಎಂಬ ಹೆಸರು ಹೊರರಾಜ್ಯಗಳಲ್ಲಿ ಹೆಚ್ಚಿನ ಮನ್ನಣೆ ಪಡೆದಿಲ್ಲ. ಆದರೆ, ಜಿಲ್ಲಾ ಕೇಂದ್ರವಾದ ಮಂಗಳೂರು ಶಿಕ್ಷಣ, ಬ್ಯಾಂಕಿಂಗ್, ಆರೋಗ್ಯ ಹಾಗೂ ಉದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಹಿಂದೆ 2008ರ ಕ್ಷೇತ್ರ ಪುನರ್ವಿಂಗಡಣೆಗೂ ಮುನ್ನ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ‘ಮಂಗಳೂರು ಕ್ಷೇತ್ರ’ ಎಂದೇ ಕರೆಯಲಾಗುತ್ತಿತ್ತು. ಹೀಗಾಗಿ, ಜಿಲ್ಲೆಯನ್ನು 'ಮಂಗಳೂರು' ಎಂದು ಮರುನಾಮಕರಣ ಮಾಡಬೇಕು ಎಂಬ ಒತ್ತಾಯಕ್ಕೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗಿದೆ.
ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಜನರ ಅಭಿಪ್ರಾಯ ಪಡೆದು, ಒಂದು ತಿಂಗಳ ಬಳಿಕ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದರಿಂದಾಗಿ ದಶಕಗಳ ಈ ಸುದೀರ್ಘ ಹೋರಾಟಕ್ಕೆ ಸಾರ್ವಜನಿಕರ ಅಭಿಪ್ರಾಯವೇ ಅಂತಿಮವಾಗಲಿದೆ.







Comments