ಬಿಜೆಪಿ ನಾಯಕನ ಪುತ್ರನಿಂದ ಯುವತಿಗೆ ವಂಚನೆ: ಮದುವೆಯಾಗುವುದೇ ಉತ್ತಮ ಎಂದು ಹೈಕೋರ್ಟ್ ಅಭಿಪ್ರಾಯ
- Apr 23
- 1 min read

ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ದೃಢ – ಯುವತಿಗೆ ₹10,000 ಜೀವನಾಂಶ ನೀಡಲು ಸಿದ್ಧರೇ? ಎಂದು ಕೋರ್ಟ್ ಪ್ರಶ್ನೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಕೇಳಿಬಂದ ಪ್ರೀತಿ-ವಂಚನೆ ಪ್ರಕರಣ ಇದೀಗ ಕಾನೂನು ಹಂತದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್, ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯಾಗಿಸಿ ನಂತರ ವಂಚಿಸಿದ ಆರೋಪ ಎದುರಿಸುತ್ತಿದ್ದಾನೆ.

ಈ ಪ್ರಕರಣವನ್ನು ರದ್ದುಪಡಿಸುವಂತೆ ಕೃಷ್ಣ ಜೆ. ರಾವ್ ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ವೇಳೆ ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಯುವತಿಗೆ ಆರೋಪಿಯಿಂದಲೇ ಮಗು ಹುಟ್ಟಿರುವುದರಿಂದ ಮದುವೆಯಾಗುವುದು ಉತ್ತಮ ಎಂದು ಕೋರ್ಟ್ ಹೇಳಿದೆ. ಅಲ್ಲದೆ ಯುವತಿ ಹಾಗೂ ಮಗುವನ್ನು ಅನಾಥರನ್ನಾಗಿಸುವುದು ಸರಿಯಲ್ಲ, ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿಯ ಕರ್ತವ್ಯ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಯುವತಿಗೆ ಮಾಸಿಕ ₹10,000 ಜೀವನಾಂಶ ನೀಡಲು ಆರೋಪಿಯು ಸಿದ್ಧರಿದ್ದಾನೆಯೇ ಎಂದು ಕೋರ್ಟ್ ಪ್ರಶ್ನಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಲಾಗಿದೆ.
ಆರೋಪಿ ಪರ ವಾದ:
ಆರೋಪಿ ಪರ ವಕೀಲರು, ಇಬ್ಬರ ನಡುವೆ 7 ವರ್ಷಗಳ ಪ್ರೀತಿ ಸಂಬಂಧವಿತ್ತು. ರಾಜಕೀಯ ವೈಮನಸ್ಸಿನಿಂದ ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದ್ದಾರೆ. ಕ್ರಿಮಿನಲ್ ಪ್ರಕರಣದಿಂದ ರಾಜಿ ಸಾಧ್ಯವಾಗಿಲ್ಲ ಹಾಗೂ ಆರೋಪಿ ತಂದೆಯ ವಿರುದ್ಧ ರಾಜಕೀಯ ದ್ವೇಷದಿಂದ ಆರೋಪ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಶಾಲಾ ದಿನಗಳಿಂದ ಪರಿಚಯವಾಗಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯಾಗಿಸಿದ ಬಳಿಕ ಕೃಷ್ಣ ಜೆ. ರಾವ್ ಮದುವೆಗೆ ನಿರಾಕರಿಸಿದ್ದಾನೆ ಎನ್ನಲಾಗಿದೆ. ಆರಂಭದಲ್ಲಿ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿಕೊಂಡಿದ್ದರೂ, ವಯಸ್ಸಿನ ಕಾರಣ ನೀಡಿ ನಂತರ ಹಿಂದೆ ಸರಿದಿದ್ದಾನೆ. ಮಗು ಜನಿಸಿದ ಬಳಿಕ ‘ಮಗು ನನ್ನದಲ್ಲ’ ಎಂದು ಹೇಳಿದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು.
ಬೆಂಗಳೂರಿನ ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಮಗುವಿನ ತಂದೆ ಕೃಷ್ಣ ಜೆ. ರಾವ್ ಎನ್ನುವುದು ದೃಢಪಟ್ಟಿದೆ. ಆದರೂ, ಮದುವೆಗೆ ಇನ್ನೂ ನಿರಾಕರಿಸುತ್ತಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಈ ಸಂವೇದನಾಶೀಲ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 24ರಂದು ನಡೆಯಲಿದ್ದು, ಕೋರ್ಟ್ ಸೂಚನೆಗಳಿಗೆ ಆರೋಪಿಯ ಪ್ರತಿಕ್ರಿಯೆ ಏನಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.







Comments