ನಿಶ್ಚಿತಾರ್ಥವಾದ ಯುವಕನನ್ನು ಕೋಟೆಯಿಂದ ತಳ್ಳಿ ಕೊಲೆ ಯುವತಿ ಮತ್ತು ಪ್ರಿಯಕರ ಪೊಲೀಸ್ ಕಸ್ಟಡಿಗೆ

ಪುಣೆಯ ಲೋಹಗಢ ಕೋಟೆಯಲ್ಲಿ ನಡೆದಿದ್ದ 26 ವರ್ಷದ ಕೇತನ್ ಅಗರವಾಲ್ ಸಾವಿನ ಪ್ರಕರಣ ಇದೀಗ ಭೀಕರ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ನಿಶ್ಚಿತಾರ್ಥವಾಗಿದ್ದ ಕೇತನ್ ಅಗರವಾಲ್‌ರನ್ನು ಅವರ ಭವಿಷ್ಯದ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಸ್ನೇಹಿತ ಚೇತನ್ ಚೌಧರಿ ಸೇರಿ ಕೋಟೆಯಿಂದ ತಳ್ಳಿಹಾಕಿ ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ಪುಣೆ ಮ್ಯಾಜಿಸ್ಟ್ರೇಟ್ ಕೋರ್ಟ್ ಇಬ್ಬರನ್ನೂ ಜೂನ್ 29ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
"ಜಾರಿ ಬಿದ್ದು ಸತ್ತಿದ್ದಾರೆ" ಎಂದು ಹೇಳಿದ್ದ ಸಿಯಾ
ಜೂನ್ 18ರಂದು ಸಿಯಾ ಗೋಯಲ್ ಮತ್ತು ಕೇತನ್ ಅಗರವಾಲ್ ಲೋಹಗಢ ಕೋಟೆಗೆ ತೆರಳಿದ್ದರು. ಬಳಿಕ ಕೇತನ್ ಕಾಲು ಜಾರಿ ಕೋಟೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಸಿಯಾ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಆದರೆ ಕೇತನ್ ಕುಟುಂಬದವರು ಮತ್ತು ಸ್ನೇಹಿತರು ಈ ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅನುಭವಿ ಟ್ರೆಕ್ಕರ್ ಆಗಿದ್ದ ಕೇತನ್ ಅಷ್ಟು ಸುಲಭವಾಗಿ ಜಾರಿ ಬೀಳುವುದು ಸಾಧ್ಯವಿಲ್ಲ ಎಂದು ಕುಟುಂಬದವರು ದೂರಿದ್ದರು.
ತನಿಖೆಯಲ್ಲಿ ಬಯಲಾಯ್ತು ಸಂಚು!
ಪುಣೆ ಗ್ರಾಮೀಣ ಪೊಲೀಸ್ ಅಧೀಕ್ಷಕ ಸಂದೀಪ್ ಸಿಂಗ್ ಗಿಲ್ ಅವರ ಪ್ರಕಾರ, ತಾಂತ್ರಿಕ ಸಾಕ್ಷ್ಯಗಳು, ಸಾಕ್ಷಿದಾರರ ಹೇಳಿಕೆಗಳು ಮತ್ತು ಗುಪ್ತ ಮಾಹಿತಿ ಆಧರಿಸಿದ ತನಿಖೆಯಲ್ಲಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಕಳೆದ ಒಂದು ವರ್ಷದಿಂದ ಪರಿಚಿತರಾಗಿದ್ದು, ಕೇತನ್‌ನನ್ನು ಕೊಲ್ಲಲು ಪೂರ್ವಯೋಜಿತ ಸಂಚು ರೂಪಿಸಿದ್ದರು ಎಂಬುದು ಬೆಳಕಿಗೆ ಬಂದಿದೆ.
ಕೋಟೆಯಲ್ಲಿ ಕೇತನ್‌ರನ್ನು ತಳ್ಳಿಹಾಕಿ ಸಾವಿಗೆ ಕಾರಣರಾದ ಆರೋಪದಲ್ಲಿ ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ವಿಚಾರಣೆ ವೇಳೆ ಇಬ್ಬರೂ ಅಪರಾಧ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.
"ಮದುವೆ ಬೇಡ ಎಂದಿದ್ದರೆ ಸಾಕಿತ್ತು..."
ಮೃತ ಕೇತನ್ ಅಗರವಾಲ್ ಅವರ ತಂದೆ ಭಾವುಕರಾಗಿ ಮಾತನಾಡಿ,
"ಸಿಯಾಗೆ ಮದುವೆಯಾಗಲು ಇಷ್ಟವಿರಲಿಲ್ಲ ಅಂದರೆ ನೇರವಾಗಿ ನಿರಾಕರಿಸಬಹುದಿತ್ತು. ನಾವು ತಕ್ಷಣವೇ ಮದುವೆ ರದ್ದುಪಡಿಸುತ್ತಿದ್ದೆವು. ಆದರೆ ನನ್ನ 26 ವರ್ಷದ ಮಗನ ಜೀವವನ್ನೇ ಕಸಿದುಕೊಂಡಿದ್ದಾರೆ" ಎಂದು ಕಣ್ಣೀರಿಟ್ಟಿದ್ದಾರೆ.
ಅವರು ಮತ್ತಷ್ಟು ಆರೋಪಿಸಿ, "ಸಿಯಾ ಮತ್ತು ಕೇತನ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೂನ್ 6ರಂದು ಬಾಲಿಗೆ ಪ್ರವಾಸ ಹೋಗುವ ಯೋಜನೆಯೂ ಇತ್ತು. ಆದರೆ ಕೇತನ್ ಪಾಸ್‌ಪೋರ್ಟ್ ಕಳ್ಳತನವಾದ ಕಾರಣ ಪ್ರವಾಸ ರದ್ದಾಗಿತ್ತು. ನಂತರ ಲೋಹಗಢ ಕೋಟೆಯಲ್ಲಿ ಸಿಯಾ ಮತ್ತು ಚೇತನ್ ಸೇರಿ ಕೇತನ್ ಮೇಲೆ ಹಲ್ಲೆ ನಡೆಸಿ, ಮೇಲಿನಿಂದ ತಳ್ಳಿದ್ದಾರೆ" ಎಂದು ಹೇಳಿದ್ದಾರೆ.
ಕಠಿಣ ಶಿಕ್ಷೆಗೆ ಒತ್ತಾಯ
"ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ಇಂತಹ ಕ್ರೂರ ಕೃತ್ಯಗಳಿಗೆ ಸಮಾಜಕ್ಕೆ ಸ್ಪಷ್ಟ ಸಂದೇಶ ಹೋಗಬೇಕು" ಎಂದು ಕೇತನ್ ತಂದೆ ಸರ್ಕಾರವನ್ನು ಆಗ್ರಹಿಸಿದ್ದಾರೆ.







Comments