ಪ್ರಪೋಸ್ ನೆಪದಲ್ಲಿ ಪ್ರಿಯಕರನ ಕಣ್ಣಿಗೆ ಬಟ್ಟೆ ಕಟ್ಟಿ ಬೆಂಕಿ ಹಚ್ಚಿ ಕೊಂದ ಯುವತಿ!
- 10 hours ago
- 1 min read

ಬೆಂಗಳೂರಿನ ಅಂಜನಾಪುರದಲ್ಲಿ ನಡೆದ ಕ್ರೂರ ಕೃತ್ಯ; ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರು
ಬೆಂಗಳೂರು, ಏಪ್ರಿಲ್ 22:
ದಕ್ಷಿಣ ಬೆಂಗಳೂರಿನ ಅಂಜನಾಪುರದಲ್ಲಿ ಪ್ರೇಮ ಸಂಬಂಧವು ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ಕಿರಣ್ (27) ಎಂಬ ಯುವಕನನ್ನು ಅವನ ಪ್ರಿಯತಮೆಯೇ ಪ್ರಪೋಸಲ್ ಹೆಸರಿನಲ್ಲಿ ಮನೆಗೆ ಕರೆದು ಕ್ರೂರವಾಗಿ ಕೊಲೆ ಮಾಡಿದ ಆರೋಪ ಕೇಳಿಬಂದಿದೆ.
ಮೃತ ಕಿರಣ್ ಹಾಗೂ ಆರೋಪಿಯಾದ ಯುವತಿ ಇಬ್ಬರೂ ರಾಜಾಜಿನಗರದ ವೊಡಾಫೋನ್ ಮಳಿಗೆಯಲ್ಲಿ ಸಹೋದ್ಯೋಗಿಗಳಾಗಿದ್ದು, ಕಳೆದ ಒಂದು ವರ್ಷದಿಂದ ಪ್ರೇಮ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ಕಿರಣ್ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಹಾಗೂ ಮದುವೆಗೆ ಹಿಂದೇಟು ಹಾಕುತ್ತಿದ್ದಾನೆ ಎಂಬ ಅನುಮಾನದಿಂದ ಯುವತಿ ಅಸಮಾಧಾನಗೊಂಡಿದ್ದಳು ಎನ್ನಲಾಗಿದೆ.

ಪ್ರಪೋಸಲ್ ನಾಟಕದಿಂದ ಹತ್ಯೆ:
ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಕಿರಣ್‌ನನ್ನು ಮನೆಗೆ ಆಹ್ವಾನಿಸಿದ್ದ ಯುವತಿ, “ವಿದೇಶಗಳಲ್ಲಿ ಟ್ರೆಂಡ್ ಆಗಿರುವ ಪ್ರಪೋಸಲ್ ನೀಡುತ್ತೇನೆ” ಎಂದು ನಂಬಿಸಿ ಅವನ ಕಣ್ಣು ಕಟ್ಟಿಸಿ ಕುರ್ಚಿಗೆ ಕಟ್ಟಿ ಹಾಕಿದ್ದಳು. ಆರಂಭದಲ್ಲಿ ಕಿರಣ್ ವಿರೋಧಿಸಿದರೂ, ಪ್ರೀತಿಯ ನಾಟಕವಾಡಿ ಆತನನ್ನು ಸಮಾಧಾನಪಡಿಸಿದ್ದಾಳೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪ:
ಕುರ್ಚಿಗೆ ಕಟ್ಟಿದ ಬಳಿಕ, ಪೂರ್ವ ಯೋಜನೆಯಂತೆ ತಂದಿದ್ದ ಪೆಟ್ರೋಲ್ ಹಾಗೂ ಸೀಮೆಎಣ್ಣೆಯನ್ನು ಕಿರಣ್ ಮೇಲೆ ಸುರಿದು ಬೆಂಕಿ ಹಚ್ಚಿದ ಆರೋಪ ಕೇಳಿಬಂದಿದೆ. ಬೆಂಕಿಯಲ್ಲಿ ನರಳಾಡುತ್ತಿದ್ದ ಕಿರಣ್‌ನ್ನು ರಕ್ಷಿಸುವ ಬದಲು, ಆಕೆ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಾ ನೋಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪೊಲೀಸರ ತನಿಖೆ:
ಘಟನೆಯ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತನನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಮೂಲದ ಕಿರಣ್ ಎಂದು ಗುರುತಿಸಲಾಗಿದೆ. ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗುತ್ತದೆ.
ಪ್ರಾಥಮಿಕ ತನಿಖೆಯಲ್ಲಿ, ಈ ಕೃತ್ಯ ಪೂರ್ವ ಯೋಜಿತವಾಗಿರುವ ಸಾಧ್ಯತೆಗಳು ಕಂಡುಬಂದಿದ್ದು, ಹೆಚ್ಚಿನ ವಿವರಗಳು ತನಿಖೆಯ ಬಳಿಕವೇ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.







Comments