ಬಾಂಗ್ಲಾದಲ್ಲಿ ಮತ್ತೆ ಮೃತ್ಯು ನರ್ತನ: ಗ್ಯಾರೇಜ್‌ಗೆ ಬೆಂಕಿ ಹಚ್ಚಿ ಹಿಂದೂ ಯುವಕನ ಸಜೀವ ದಹನ!
- sathyapathanewsplu
- Jan 25
- 1 min read

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ನರಸಿಂಗ್ಲಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ಯುವಕ ಚಂಚಲ್ ಚಂದ್ರ ಭೌಮಿಕ್ ಎಂಬುವವರನ್ನು ಅವರು ಮಲಗಿದ್ದ ಗ್ಯಾರೇಜ್ ಒಳಗೇ ಸುಟ್ಟು ಹಾಕಿರುವ ಭೀಕರ ಘಟನೆ ನಡೆದಿದೆ. ಮೂಲತಃ ಕುಮಿಲ್ಲಾ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದವರಾದ ಚಂಚಲ್, ಕೆಲಸದ ನಿಮಿತ್ತ ನರಸಿಂಗ್ಲಿಯಲ್ಲಿ ವಾಸವಿದ್ದರು. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಏಕೈಕ ಪುತ್ರನನ್ನೇ ಕಳೆದುಕೊಂಡ ಕುಟುಂಬ ಈಗ ಬೀದಿಗೆ ಬಿದ್ದಂತಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶುಕ್ರವಾರ ತಡರಾತ್ರಿ ಚಂಚಲ್ ಅವರು ಮಸೀದಿ ಮಾರುಕಟ್ಟೆ ಪ್ರದೇಶದ ಬಳಿಯಿರುವ ಗ್ಯಾರೇಜ್‌ನಲ್ಲಿ ಗಾಢ ನಿದ್ರೆಯಲ್ಲಿದ್ದಾಗ ಈ ಕ್ರೌರ್ಯ ಮೆರೆಯಲಾಗಿದೆ. ಕಿಡಿಗೇಡಿಗಳು ಹೊರಗಿನಿಂದ ಗ್ಯಾರೇಜ್‌ನ ಶಟರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಟ್ಟಡವನ್ನು ಆವರಿಸಿಕೊಂಡಿದ್ದರಿಂದ ಚಂಚಲ್ ಅವರಿಗೆ ಹೊರಬರಲು ಸಾಧ್ಯವಾಗದೆ ಒಳಗೇ ಸಜೀವ ದಹನವಾಗಿದ್ದಾರೆ. ದಾಳಿಕೋರರು ಪೆಟ್ರೋಲ್ ಸುರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಯ ಭೀಕರತೆಗೆ ಸಾಕ್ಷಿಯಾಗಿವೆ. ಅಗ್ನಿಶಾಮಕ ದಳದವರು ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರೂ, ಅಷ್ಟರಲ್ಲಾಗಲೇ ಚಂಚಲ್ ಅವರ ದೇಹ ಸುಟ್ಟು ಕರಕಲಾಗಿತ್ತು.
ಇದು ಆಕಸ್ಮಿಕವಾಗಿ ಸಂಭವಿಸಿದ ಅನಾಹುತವಲ್ಲ, ಬದಲಿಗೆ ವ್ಯವಸ್ಥಿತವಾಗಿ ನಡೆದ ಪೂರ್ವನಿಯೋಜಿತ ಹತ್ಯೆ ಎಂದು ಮೃತನ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ನರಸಿಂಗ್ಲಿ ಪೊಲೀಸ್ ಠಾಣೆಗೆ ಸಮೀಪದಲ್ಲೇ ಈ ಘಟನೆ ನಡೆದಿರುವುದು ಭದ್ರತೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಘಟನೆಯ ಬೆನ್ನಲ್ಲೇ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ಹತ್ಯೆಯ ಹಿಂದಿರುವ ನೈಜ ಉದ್ದೇಶ ಮತ್ತು ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಸುರಕ್ಷತೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಘಟನೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.






Comments