ಚೀನಾದಲ್ಲಿ ಪ್ರವಾಹ: ವಸತಿ ಪ್ರದೇಶಗಳಿಗೆ ನುಗ್ಗಿದ 900 ವಿಷಕಾರಿ ಹಾವುಗಳು, ಜನರಲ್ಲಿ ಆತಂಕ

ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದಲ್ಲಿ ಸುರಿದ ಭಾರೀ ಮಳೆ ಹಾಗೂ ಭೀಕರ ಪ್ರವಾಹದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರವಾಹದ ನೀರು ವಾಣಿಜ್ಯ ಹಾವು ಸಾಕಣೆ ಕೇಂದ್ರಗಳಿಗೆ ನುಗ್ಗಿದ ಪರಿಣಾಮ, ಸುಮಾರು 900ಕ್ಕೂ ಹೆಚ್ಚು ವಿಷಕಾರಿ ಹಾವುಗಳು ಪಂಜರಗಳಿಂದ ತಪ್ಪಿಸಿಕೊಂಡು ವಸತಿ ಪ್ರದೇಶಗಳಿಗೆ ನುಗ್ಗಿವೆ. ಪ್ರವಾಹದ ನೀರಿನಲ್ಲೇ ಹಾವುಗಳು ಈಜಾಡುತ್ತಿರುವುದು ಕಂಡುಬಂದಿದ್ದು, ರಸ್ತೆ ಹಾಗೂ ಮನೆಗಳಿಗೂ ನುಗ್ಗುತ್ತಿರುವುದರಿಂದ ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಹೆಂಗ್‌ಝೌ ನಗರದಲ್ಲಿ ಹಾವಿನ ಕಡಿತಕ್ಕೊಳಗಾದ ಮಹಿಳೆಯೊಬ್ಬರು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.
ಗುವಾಂಗ್ಕ್ಸಿ ಪ್ರಾಂತ್ಯವು ವಿಶ್ವದ ಅತಿದೊಡ್ಡ ಹಾವು ಸಾಕಣೆ ಕೇಂದ್ರಗಳನ್ನು ಹೊಂದಿದ್ದು, ಸಾಂಪ್ರದಾಯಿಕ ಔಷಧ ಹಾಗೂ ಆಹಾರದ ಉದ್ದೇಶಕ್ಕಾಗಿ ಇಲ್ಲಿ ಕೋಟ್ಯಂತರ ಹಾವುಗಳನ್ನು ಸಾಕಲಾಗುತ್ತದೆ. ಪ್ರಸ್ತುತ ಪ್ರವಾಹದಿಂದಾಗಿ ಸಾಕಣೆ ಕೇಂದ್ರಗಳ ಗೋಡೆಗಳು ಕುಸಿದು ಹಾವುಗಳು ಹೊರಬಂದಿವೆ. ಇದರೊಂದಿಗೆ ಸ್ಥಳೀಯ ಮೃಗಾಲಯದ ಗೋಡೆಯೂ ಕುಸಿದಿದ್ದು, ಜೀಬ್ರಾಗಳು ಸೇರಿದಂತೆ ನೂರಕ್ಕೂ ಹೆಚ್ಚು ಪ್ರಾಣಿಗಳು ನಾಪತ್ತೆಯಾಗಿವೆ. ಈ ಭೀಕರ ನೈಸರ್ಗಿಕ ವಿಕೋಪಕ್ಕೆ ಇದುವರೆಗೆ ಆರು ಮಂದಿ ಬಲಿಯಾಗಿದ್ದು, 1.3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಚೀನಾ ಸರ್ಕಾರವು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ ಕೈಗೊಂಡಿದೆ. ಹಾವುಗಳನ್ನು ಹಿಡಿಯಲು ವಿಶೇಷ ತಜ್ಞರ ತಂಡಗಳನ್ನು ನಿಯೋಜಿಸಲಾಗಿದ್ದು, 5,700ಕ್ಕೂ ಹೆಚ್ಚು ರಕ್ಷಣಾ ಬೋಟ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. ಹಾವಿನ ಕಡಿತಕ್ಕೆ ತಕ್ಷಣದ ಚಿಕಿತ್ಸೆ ನೀಡಲು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದ್ದು, ಅಗತ್ಯವಿರುವ ಆಂಟಿ-ವೆನಮ್ ಔಷಧಗಳನ್ನು ಸಿದ್ಧವಾಗಿಡಲಾಗಿದೆ. ಆದಾಗ್ಯೂ, ಮನೆಗಳು ಮತ್ತು ಕೃಷಿಭೂಮಿಗಳು ಜಲಾವೃತಗೊಂಡಿರುವುದರಿಂದ ಜನಜೀವನ ಇನ್ನು ಸಹಜ ಸ್ಥಿತಿಗೆ ಮರಳಿಲ್ಲ.







Comments