ಉಪ್ಪಿನಂಗಡಿ: ಚಾಲಕನಿಗೆ ಎದೆನೋವು; ಪ್ರಯಾಣಿಕನ ಸಮಯಪ್ರಜ್ಞೆಯಿಂದ ತಪ್ಪಿದ ಭೀಕರ ಬಸ್ ಅಪಘಾತ

ಉಪ್ಪಿನಂಗಡಿ: ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾಲಕನಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ನಿಯಂತ್ರಣ ತಪ್ಪುತ್ತಿದ್ದ ಬಸ್ಸನ್ನು, ಪ್ರಯಾಣಿಕರೊಬ್ಬರು ಸಮಯಪ್ರಜ್ಞೆ ಮೆರೆದು ಹತೋಟಿಗೆ ತಂದು ನಿಲ್ಲಿಸುವ ಮೂಲಕ ಭೀಕರ ಅಪಘಾತವೊಂದನ್ನು ತಪ್ಪಿಸಿದ ಘಟನೆ ಪೆರ್ನೆ ಗ್ರಾಮದ ಕರ್ವೇಲು ಎಂಬಲ್ಲಿ ಗುರುವಾರ ನಡೆದಿದೆ. ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಈ ಆತಂಕಕಾರಿ ಘಟನೆ ಸಂಭವಿಸಿದೆ.
ಬಸ್ ಚಾಲಕ ಗೋವಿಂದ ನಾಯ್ಕ ಅವರು ಕರ್ವೇಲು ಸಮೀಪಿಸುತ್ತಿದ್ದಂತೆ ತೀವ್ರ ಎದೆನೋವಿನಿಂದ ಅಸ್ವಸ್ಥರಾದರು. ಇದರಿಂದಾಗಿ ಬಸ್ಸಿನ ಚಾಲನೆಯಲ್ಲಿ ಏರುಪೇರಾಗಿ ಪ್ರಯಾಣಿಕರಲ್ಲಿ ಆತಂಕ ಶುರುವಾಗಿತ್ತು. ಈ ಅಪಾಯವನ್ನು ತಕ್ಷಣವೇ ಗಮನಿಸಿದ ಬಸ್ಸಿನಲ್ಲಿದ್ದ ಪ್ರಯಾಣಿಕ, ನೆಲ್ಯಾಡಿಯ ನ್ಯಾಯವಾದಿ ಇಸ್ಮಾಯೀಲ್ ಅವರ ಪುತ್ರ ಸಲ್ಮಾನುಲ್ ಫಾರಿಸ್ ಅವರು ಕೂಡಲೇ ಚಾಲಕನ ಸೀಟಿನತ್ತ ಧಾವಿಸಿದರು. ಚಲಿಸುತ್ತಿದ್ದ ಬಸ್ಸಿನ ಸ್ಟೀರಿಂಗ್ ಮತ್ತು ಬ್ರೇಕ್ ಅನ್ನು ಜಾಣ್ಮೆಯಿಂದ ಹತೋಟಿಗೆ ತಂದು ರಸ್ತೆ ಬದಿಗೆ ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದರು.
ಬಳಿಕ ಅಸ್ವಸ್ಥ ಚಾಲಕನನ್ನು ತಕ್ಷಣವೇ ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸಲ್ಮಾನುಲ್ ಫಾರಿಸ್ ಅವರ ಈ ಸಾಹಸಮಯ ಹಾಗೂ ಸಮಯೋಚಿತ ನಿರ್ಧಾರದಿಂದ ಬಸ್ಸಿನಲ್ಲಿದ್ದ ಹತ್ತಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಸಾರಿಗೆ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಬಸ್ಸನ್ನು ಉಪ್ಪಿನಂಗಡಿ ನಿಲ್ದಾಣಕ್ಕೆ ತರಲಾಗಿದ್ದು, ಸಾರ್ವಜನಿಕರು ಯುವಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.







Comments