ಬೆಂಗಳೂರು: ಮದುವೆಯ ಆಮಿಷವೊಡ್ಡಿ ಇಬ್ಬರು ಸಹೋದರಿಯರಿಗೆ ವಂಚನೆ; ಕಾಮುಕ ಶುಭಾಂಶು ಶುಕ್ಲಾ ಬಂಧನ
- sathyapathanewsplu
- Dec 29, 2025
- 1 min read

ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದ ಅಮಾನವೀಯ 'ಲವ್ ಸೆಕ್ಸ್ ದೋಖಾ' ಪ್ರಕರಣವೊಂದರಲ್ಲಿ ಆರೋಪಿ ಶುಭಾಂಶು ಶುಕ್ಲಾ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಅಪ್ರಾಪ್ತ ಬಾಲಕಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಈತ, ಬಳಿಕ ಆಕೆಯ ಮೂಲಕ ಮನೆಯವರ ವಿಶ್ವಾಸ ಗಳಿಸಿದ್ದನು. ನಂತರ ಆಕೆಯ ಸಹೋದರಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ, ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ನಂಬಿಸಿ ಆಕೆಯನ್ನು ತನ್ನೊಂದಿಗೆ ಕರೆದೊಯ್ದು ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದನು.
ಸಮಯ ಕಳೆದಂತೆ ಆರೋಪಿಗೆ ಈಗಾಗಲೇ ಮದುವೆಯಾಗಿರುವುದು ಸಂತ್ರಸ್ತೆಗೆ ತಿಳಿದುಬಂದಿದೆ. ಆತನ ಪತ್ನಿಯೂ ತಾನು ವಿಚ್ಛೇದನ ನೀಡುವುದಾಗಿ ಹೇಳಿದ್ದರಿಂದ ಸಂತ್ರಸ್ತೆ ಆತನನ್ನು ನಂಬಿ ಸಂಬಂಧ ಮುಂದುವರಿಸಿದ್ದಳು. ಆದರೆ, ಶುಭಾಂಶು ಮತ್ತೊಬ್ಬ ಅಪ್ರಾಪ್ತ ಯುವತಿಗೂ ಇದೇ ರೀತಿ ವಂಚಿಸುತ್ತಿರುವುದು ಬಯಲಾದಾಗ ಸಂತ್ರಸ್ತೆ ಆತನ ಬಂಡವಾಳವನ್ನು ಬಯಲು ಮಾಡಿದ್ದಳು. ಇದರಿಂದ ಕೆರಳಿದ ಆರೋಪಿ ಯುವತಿಗೆ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ನೀಡಲು ಆರಂಭಿಸಿದ್ದನು ಎಂದು ದೂರಲಾಗಿದೆ.
ಬಂಧಿತ ಆರೋಪಿ ಶುಭಾಂಶು ಸಂತ್ರಸ್ತ ಯುವತಿಯಿಂದ ಸುಮಾರು 37 ಲಕ್ಷ ರೂಪಾಯಿ ಹಣವನ್ನು ಬೆದರಿಸಿ ಕಿತ್ತುಕೊಂಡಿದ್ದಲ್ಲದೆ, ಆಕೆಯ ಮನೆಯಲ್ಲಿದ್ದ 559 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾನೆ. ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಸಂತ್ರಸ್ತೆ ಆತನಿಂದ ದೂರ ಉಳಿದಿದ್ದಳು. ಪ್ರಸ್ತುತ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ.






Comments