ವಿಟ್ಲ ಶ್ರೀ ಇಲೆಕ್ಟ್ರಾನಿಕ್ಸ್ ಅಂಗಡಿಗೆ ಬೆಂಕಿ – ಪಕ್ಕದ ಅಂಗಡಿಗೂ ವ್ಯಾಪ್ತಿ; ಸ್ಥಳೀಯರ ಹರಸಾಹಸ, ಅಗ್ನಿಶಾಮಕ ತಂಡ
- sathyapathanewsplu
- Dec 31, 2025
- 1 min read

ವಿಟ್ಲ ಪೇಟೆಯ ಮಂಗಳೂರು ರಸ್ತೆಯಲ್ಲಿ ಗಣೇಶ್ ಡ್ರೈವಿಂಗ್ ಸ್ಕೂಲ್ ಪಕ್ಕದಲ್ಲಿರುವ ಶ್ರೀ ಇಲೆಕ್ಟ್ರಾನಿಕ್ಸ್ ಅಂಗಡಿಗೆ ಇಂದು ಅಕಸ್ಮಾತ್ತಾಗಿ ಬೆಂಕಿ ತಗುಲಿದ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಅಂಗಡಿಯೊಳಗೆ ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಭಾರೀ ಸದ್ದುಗಳು ಕೇಳಿಬಂದಿದ್ದು, ಸ್ಥಳೀಯರು ನೀರು ಮತ್ತು ಮರಳು ಎಸೆದು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಉರಿ ಇನ್ನಷ್ಟು ತೀವ್ರಗೊಂಡಿದೆ. ಸುತ್ತಮುತ್ತ ಹಲವು ಅಂಗಡಿ ಮುಂಗಟ್ಟುಗಳಿರುವುದರಿಂದ ಬೆಂಕಿ ವಿಸ್ತಾರಗೊಳ್ಳುವ ಭಾರೀ ಅಪಾಯ ಎದುರಾಗಿದೆ.
ಶ್ರೀ ಇಲೆಕ್ಟ್ರಾನಿಕ್ಸ್‌ಗೆ ತಗುಲಿದ ಬೆಂಕಿ ಪಕ್ಕದ ಟೈಲರ್ ಶಾಪ್‌ಗೂ ವ್ಯಾಪಿಸಿರುವುದು ಆತಂಕ ಮೂಡಿಸಿದೆ. ಸಮೀಪದಲ್ಲೇ ಫಾಸ್ಟ್ ಫುಡ್ ಅಂಗಡಿ ಹಾಗೂ ಅಮಿತ್ ಹೋಟೆಲ್ ಇರುವುದರಿಂದ, ಸಮಯಕ್ಕೆ ಬೆಂಕಿ ನಂದಿಸದಿದ್ದರೆ ಇನ್ನಷ್ಟು ಅಂಗಡಿಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
ಘಟನಾ ಸ್ಥಳದ ಸುತ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಪೊಲೀಸರು ತಕ್ಷಣವೇ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸುತ್ತಿದ್ದಾರೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ವಿಟ್ಲಕ್ಕೆ ಸ್ವಂತ ಅಗ್ನಿಶಾಮಕ ಕಚೇರಿ ಇಲ್ಲದ ಕಾರಣ ಪುತ್ತೂರು ಅಥವಾ ಬಿ.ಸಿ.ರೋಡ್ನಿಂದ ದಳ ಆಗಮಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ವಿಟ್ಲ–ಮಂಗಳೂರು ರಸ್ತೆ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.






Comments