;
top of page

500 ಸರ್ಕಾರಿ ಶಾಲೆಗಳು ಕೆಪಿಎಸ್‌ಗಳಾಗಿ ಅಭಿವೃದ್ಧಿ: ಎಡಿಬಿಯಿಂದ ₹1,750 ಕೋಟಿ ನೆರವು

Aug 22
1 min read

ಬೆಂಗಳೂರು: ರಾಜ್ಯದ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆಪಿಎಸ್) ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ₹1,750 ಕೋಟಿ ಆರ್ಥಿಕ ನೆರವು ನೀಡಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಎಡಿಬಿ ನಡುವೆ ಮಹತ್ವದ ಒಪ್ಪಂದಕ್ಕೆ ಶುಕ್ರವಾರ ವಿಧಾನಸೌಧದಲ್ಲಿ ಸಹಿ ಹಾಕಲಾಯಿತು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಎಡಿಬಿ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.


ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ ಒಟ್ಟು ₹2,500 ಕೋಟಿ ವೆಚ್ಚದಲ್ಲಿ 500 ಕೆಪಿಎಸ್ ಶಾಲೆಗಳನ್ನು ಅಭಿವೃದ್ಧಿಪಡಿಸಲಿದೆ. ಈ ಪೈಕಿ ಎಡಿಬಿ ₹1,750 ಕೋಟಿ ನೆರವು ನೀಡಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು


ಪ್ರತಿ ಶಾಲೆಯಲ್ಲಿ 1,200 ವಿದ್ಯಾರ್ಥಿಗಳಿಗೆ ಅವಕಾಶ


ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಸಾಮರ್ಥ್ಯ ಹೊಂದಿರುವ ಸರ್ಕಾರಿ ಶಾಲೆಗಳನ್ನು ಕೆಪಿಎಸ್‌ಗಳಾಗಿ ಉನ್ನತೀಕರಿಸಲಾಗುತ್ತಿದ್ದು, ಪ್ರತಿ ಶಾಲೆಯಲ್ಲೂ ಕನಿಷ್ಠ 1,200 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಾಮರ್ಥ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಶಾಲೆಗಳಲ್ಲಿ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ಕಲಿಕಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಹೇಳಿದರು.

ಭಾರತದ ಶಿಕ್ಷಣ ಕ್ಷೇತ್ರಕ್ಕೆ ಎಡಿಬಿ ಇಷ್ಟೊಂದು ದೊಡ್ಡ ಮೊತ್ತದ ಆರ್ಥಿಕ ನೆರವು ನೀಡುತ್ತಿರುವುದು ಇದೇ ಮೊದಲು. ರಾಜ್ಯ ಸರ್ಕಾರದ ಕೆಪಿಎಸ್ ಯೋಜನೆ, ಗುಣಮಟ್ಟದ ಶಿಕ್ಷಣಕ್ಕಾಗಿ ಕೈಗೊಂಡಿರುವ ಕ್ರಮಗಳು ಮತ್ತು ಯೋಜನೆಯ ಅನುಷ್ಠಾನದ ಬದ್ಧತೆಯನ್ನು ಪರಿಶೀಲಿಸಿದ ಬಳಿಕ ಎಡಿಬಿ ನೆರವು ನೀಡಲು ಮುಂದಾಗಿದೆ ಎಂದು ಅವರು ವಿವರಿಸಿದರು.

ದ್ವಿಭಾಷಾ ಶಿಕ್ಷಣ, ಎಐಗೂ ಒತ್ತು

ದ್ವಿಭಾಷಾ ಶಿಕ್ಷಣ, ವಿದ್ಯಾರ್ಥಿಗಳ ಹಾಜರಾತಿ ದಾಖಲಿಸುವ ‘ನಿರಂತರ’ ಯೋಜನೆ, 15 ಸಾವಿರ ಶಿಕ್ಷಕರ ನೇಮಕಾತಿ, ಶಿಕ್ಷಕರಿಗೆ ನಿರಂತರ ತರಬೇತಿ, ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕ, ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣಕ್ಕೆ ಸಿದ್ಧತೆ, ವೃತ್ತಿ ಹಾಗೂ ಕೌಶಲ ಶಿಕ್ಷಣ ಮತ್ತು ಗ್ರಾಮೀಣ ಮಕ್ಕಳಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಸೇರಿದಂತೆ ಹಲವು ಕ್ರಮಗಳು ಒಪ್ಪಂದಕ್ಕೆ ಕಾರಣವಾಗಿವೆ ಎಂದು ಮಧು ಬಂಗಾರಪ್ಪ ಹೇಳಿದರು.

ಈಗಾಗಲೇ 100 ಸರ್ಕಾರಿ ಶಾಲೆಗಳನ್ನು ಕೆಪಿಎಸ್‌ಗಳಾಗಿ ಅಭಿವೃದ್ಧಿಪಡಿಸಲು ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಕೆಪಿಎಸ್‌ಗಳಾಗಿ ಉನ್ನತೀಕರಿಸುವ ಶಾಲೆಗಳನ್ನು ಸ್ಪಷ್ಟ ಮಾನದಂಡಗಳ ಆಧಾರದ ಮೇಲೆ ಗುರುತಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಹಂತ ಹಂತವಾಗಿ ಎಡಿಬಿ ನೆರವು

ಯೋಜನೆಗೆ ಈಗಾಗಲೇ ಶೇ.15ರಷ್ಟು, ಅಂದರೆ ₹262 ಕೋಟಿ ಎಡಿಬಿ ನೆರವು ನೀಡಿದೆ. 2026-27ನೇ ಸಾಲಿನಲ್ಲಿ ₹358 ಕೋಟಿ, 2027-28ರಲ್ಲಿ ₹385 ಕೋಟಿ, 2028-29ರಲ್ಲಿ ₹376 ಕೋಟಿ ಹಾಗೂ 2029-30ನೇ ಸಾಲಿನಲ್ಲಿ ₹367 ಕೋಟಿ ನೆರವು ನೀಡಲಿದೆ ಎಂದು ಸಚಿವರು ವಿವರಿಸಿದರು.

ಒಪ್ಪಂದ ಸಹಿ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಎಡಿಬಿ ಕಂಟ್ರಿ ಡೈರೆಕ್ಟರ್ ಮಿಯೋ ಓಕಾ ಸೇರಿದಂತೆ ಎಡಿಬಿ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page