ದೇರಳಕಟ್ಟೆ ಕಾಲೇಜಿನಲ್ಲಿ ರ್ಯಾಗಿಂಗ್ ಆರೋಪ: 7 ವಿದ್ಯಾರ್ಥಿಗಳಿಗೆ ಬೆದರಿಕೆ, ಹಿರಿಯರ ವಿರುದ್ಧ ಕೇಸ್!

ಉಳ್ಳಾಲ: ದೇರಳಕಟ್ಟೆಯ ಖಾಸಗಿ ಪದವಿ ಕಾಲೇಜೊಂದರಲ್ಲಿ ಏಳು ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿ, ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತ ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಹಾಡು ಹಾಡಿಸಿ ವಿಡಿಯೋ ರೆಕಾರ್ಡ್?
ದೂರಿನ ಪ್ರಕಾರ, ಅಕ್ಟೋಬರ್ 2ರಂದು ಕಾಲೇಜಿನ ಹೊರಗೆ ತೆರಳಿದ್ದ ವೇಳೆ ದೂರುದಾರ ವಿದ್ಯಾರ್ಥಿ ಹಾಗೂ ಸ್ನೇಹಿತರಿಗೆ ಹಿರಿಯ ವಿದ್ಯಾರ್ಥಿಗಳಾದ ಅಶಬ್ ಮತ್ತು ಅಸ್ಪಾಕ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 15ರಂದು ದೂರುದಾರ ಹಾಗೂ ಆತನ ಆರು ಸ್ನೇಹಿತರು ಊಟಕ್ಕೆ ಕಾಲೇಜು ಮುಂಭಾಗದ ಹೋಟೆಲ್‌ಗೆ ತೆರಳಿದ್ದ ವೇಳೆ, ಅಶಬ್ ಎಂಬಾತ ಅವರನ್ನು ಖಾಸಗಿ ಹೋಟೆಲ್‌ನ ಕೊಠಡಿಗೆ ಕರೆದೊಯ್ದು ಕೂಡಿ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲಿ ವಿದ್ಯಾರ್ಥಿಗಳಿಗೆ ಹಾಡು ಹಾಡುವಂತೆ ಒತ್ತಾಯಿಸಿ, ಹಾಡದಿದ್ದರೆ ಕೊಠಡಿಯಿಂದ ಹೊರಗೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿಗಳು ಹಾಡುತ್ತಿರುವುದನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಇತರರಿಗೆ ಹಂಚಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೈಕಾಲು ಮುರಿಯುವುದಾಗಿ ಬೆದರಿಕೆ?
ಅಕ್ಟೋಬರ್ 22ರಂದು ಅಶಬ್ ಹಾಗೂ ಮತ್ತೊಬ್ಬ ವ್ಯಕ್ತಿ ಬೈಕ್‌ನಲ್ಲಿ ಬಂದು ದೂರುದಾರನ ಸ್ನೇಹಿತನನ್ನು ಜಾಹಿದ್ ಎಂಬಾತನ ಕೊಠಡಿಗೆ ಕರೆದೊಯ್ದು ರ್ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇಷ್ಟೇ ಅಲ್ಲದೆ, ಪ್ರತಿದಿನ ಒಬ್ಬೊಬ್ಬ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಿ ರ್ಯಾಗಿಂಗ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೈಕಾಲು ಮುರಿದು ಕಬರಸ್ತಾನಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಅಶದ್, ಅಶ್ನಾಕ್ ಸೇರಿದಂತೆ ಇತರರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







Comments