SSLC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಸೆ.23ರಿಂದ ರಾಜ್ಯಮಟ್ಟದ SA-1 ಪರೀಕ್ಷೆ

ಬೆಂಗಳೂರು: 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಮೊದಲ ಸಂಕಲನಾತ್ಮಕ ಮೌಲ್ಯಮಾಪನ (SA-1) ಪರೀಕ್ಷೆಯನ್ನು ಸೆಪ್ಟೆಂಬರ್ 23ರಿಂದ 30ರವರೆಗೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಪೂರ್ವ ಸಿದ್ಧತಾ ಪರೀಕ್ಷೆ (ಪ್ರಿಪರೇಟರಿ) ಮಾದರಿಯಲ್ಲೇ SA-1 ಪರೀಕ್ಷೆ ನಡೆಯಲಿದ್ದು, ರಾಜ್ಯಾದ್ಯಂತ ಏಕರೂಪ ಪ್ರಶ್ನೆಪತ್ರಿಕೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯೇ ಸಿದ್ಧಪಡಿಸಲಿದೆ. ಆಯಾ ದಿನದ ಪ್ರಶ್ನೆಪತ್ರಿಕೆಗಳನ್ನು ಸಂಬಂಧಿಸಿದ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಕಳುಹಿಸಲಾಗುತ್ತದೆ. ಬಳಿಕ ಅವುಗಳನ್ನು ಮುದ್ರಿಸಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ.
ವಿದ್ಯಾರ್ಥಿಗಳ ಇಲ್ಲಿಯವರೆಗಿನ ಕಲಿಕಾ ಸಾಧನೆಯನ್ನು ಅಳೆಯಲು ಹಾಗೂ ಮುಂಬರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಉತ್ತಮವಾಗಿ ಸಿದ್ಧತೆ ನಡೆಸಲು ಈ ಮೌಲ್ಯಮಾಪನ ಸಹಕಾರಿಯಾಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪರೀಕ್ಷಾ ಅಕ್ರಮಕ್ಕೆ ಕಠಿಣ ಕ್ರಮ
ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ವೇಳೆ ನಕಲು, ಪ್ರಶ್ನೆಪತ್ರಿಕೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣ ಅಥವಾ ವಾಟ್ಸಾಪ್‌ನಲ್ಲಿ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಿಗೆ ಚೀಟಿ ಸರಬರಾಜು ಸೇರಿದಂತೆ ಯಾವುದೇ ಅಕ್ರಮ ನಡೆದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಶ್ನೆಪತ್ರಿಕೆಯ ಗೌಪ್ಯತೆ ಕಾಪಾಡುವಲ್ಲಿ ವಿಫಲವಾಗುವ ಅನುದಾನಿತ ಶಾಲೆಗಳ ಮಾನ್ಯತೆ ಹಾಗೂ ಅನುದಾನ ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು. ಅನುದಾನ ರಹಿತ ಶಾಲೆಗಳ ಮಾನ್ಯತೆಯನ್ನು ಶಾಶ್ವತವಾಗಿ ರದ್ದುಪಡಿಸುವ ಕ್ರಮವೂ ಜರುಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.







Comments