;
top of page

BIG NEWS: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು – ರಾಜ್ಯದಲ್ಲೂ ಉಪಚುನಾವಣೆ ಎಣಿಕೆ ಆರಂಭ

  • May 4
  • 2 min read

ಇಂದು ದೇಶದ ರಾಜಕೀಯದಲ್ಲಿ ಮಹತ್ವದ ದಿನ. ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು ಸೋಮವಾರ ನಡೆಯುತ್ತಿದೆ. ಇದರೊಂದಿಗೆ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ.

ಮಧ್ಯಾಹ್ನದ ವೇಳೆಗೆ ಬಹುತೇಕ ರಾಜ್ಯಗಳಲ್ಲಿ ಸ್ಪಷ್ಟ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ವಿವಿಧ ರಾಜ್ಯಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮತ್ತು ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್, ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆ-ಬಿಜೆಪಿ ಹಾಗೂ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟಗಳ ನಡುವೆ ಕಾದಾಟ ನಡೆಯುತ್ತಿದೆ. ಕೇರಳದಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ಮುಖಾಮುಖಿಯಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ನಡುವೆ ಹೋರಾಟ ಉಂಟಾಗಿದೆ. ಪುದುಚೇರಿಯಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ನಡುವೆ ಸ್ಪರ್ಧೆ ತೀವ್ರವಾಗಿದೆ.

ಕೆಲವು ಸಮೀಕ್ಷೆಗಳ ಪ್ರಕಾರ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸಬಹುದು ಎಂಬ ಅಂದಾಜು ವ್ಯಕ್ತವಾಗಿದ್ದು, ಅಂತಿಮ ಚಿತ್ರಣಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ.

ಮತ ಎಣಿಕೆಗೆ ಕಟ್ಟುನಿಟ್ಟಿನ ಸಿದ್ಧತೆ

ಮತ ಎಣಿಕೆ ಕೇಂದ್ರಗಳಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇವಿಎಂ ಯಂತ್ರಗಳ ಎಣಿಕೆಗಾಗಿ ಪ್ರತ್ಯೇಕ ಕೊಠಡಿ ಹಾಗೂ ಅಂಚೆ ಮತಪತ್ರಗಳ ಎಣಿಕೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 7:30ಕ್ಕೆ ಅಭ್ಯರ್ಥಿಗಳು ಮತ್ತು ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್‌ಗಳನ್ನು ತೆರೆಯಲಾಗಿದ್ದು, 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಆರಂಭವಾಗಿದೆ. 8:30ರಿಂದ ಇವಿಎಂ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.

ಒಟ್ಟು 14 ಟೇಬಲ್‌ಗಳಲ್ಲಿ ಎಣಿಕೆ ನಡೆಯುತ್ತಿದ್ದು, 21 ಸುತ್ತುಗಳಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದೆ. ಪ್ರತಿಯೊಂದು ಟೇಬಲ್‌ಗೆ ಸೂಪರ್‌ವೈಸರ್, ಮೈಕ್ರೋ ಅಬ್ಸರ್ವರ್ ಮತ್ತು ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಳಗ್ಗೆ 5 ಗಂಟೆಗೆ ಸಿಬ್ಬಂದಿಗೆ ಅಂತಿಮ ಹಂತದ ಟೇಬಲ್ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.

ಭದ್ರತಾ ಕ್ರಮಗಳು ಕಟ್ಟುನಿಟ್ಟಾಗಿ

ಮತ ಎಣಿಕೆ ಕೇಂದ್ರದ ಸುತ್ತಮುತ್ತ ಮೂರು ಹಂತದ ಭದ್ರತೆಯನ್ನು ಜಾರಿಗೊಳಿಸಲಾಗಿದೆ. 100 ಮೀಟರ್ ವ್ಯಾಪ್ತಿಯನ್ನು ಪಾದಚಾರಿ ವಲಯವನ್ನಾಗಿ ಘೋಷಿಸಿ ವಾಹನ ಸಂಚಾರ ನಿಷೇಧಿಸಲಾಗಿದೆ. ಎರಡನೇ ಹಂತದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದು, ಮೂರನೇ ಹಂತದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಆಧುನಿಕ ಸಾಧನಗಳ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ.

ಕೇಂದ್ರದೊಳಗೆ ಪ್ರವೇಶಿಸಲು ಕ್ಯೂಆರ್ ಕೋಡ್ ಹೊಂದಿರುವ ಡಿಜಿಟಲ್ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಸ್ಕ್ಯಾನಿಂಗ್ ನಂತರವೇ ಪ್ರವೇಶ ನೀಡಲಾಗುತ್ತಿದೆ. ಅನಧಿಕೃತ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿಷೇಧ ವಿಧಿಸಲಾಗಿದೆ.

ಎಲೆಕ್ಟ್ರಾನಿಕ್ ಸಾಧನಗಳಿಗೆ ನಿರ್ಬಂಧ

ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಾಧ್ಯಮದವರಿಗಾಗಿ ಪ್ರತ್ಯೇಕ ಮೀಡಿಯಾ ಸೆಂಟರ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಫಲಿತಾಂಶ ವೀಕ್ಷಣೆಗೆ ಸೌಲಭ್ಯ ಒದಗಿಸಲಾಗಿದೆ.

ವಿಜಯೋತ್ಸವಕ್ಕೆ ನಿರ್ಬಂಧ

ಪ್ರತಿ ಸುತ್ತಿನ ಫಲಿತಾಂಶವನ್ನು ತಕ್ಷಣವೇ ಸಾರ್ವಜನಿಕರಿಗೆ ಹಾಗೂ ಮಾಧ್ಯಮಗಳಿಗೆ ಪ್ರಕಟಿಸಲಾಗುತ್ತದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರೀತಿಯ ವಿಜಯೋತ್ಸವ, ಮೆರವಣಿಗೆಗಳನ್ನು ನಡೆಸಲು ಅನುಮತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page