ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್: ಯೋಜನೆ ಜಾರಿಗೆ ಕೇಂದ್ರದ ಮಹತ್ವದ ಹೆಜ್ಜೆ

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ದೇಶದ ಯುವಕರಿಗೆ ಉಚಿತ ಆನ್‌ಲೈನ್ ತರಬೇತಿ ಒದಗಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಪಕ್ರಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆದಿದ್ದು, ಯೋಜನೆಯ ಅನುಷ್ಠಾನದ ಕುರಿತು ಸಮಗ್ರ ಚರ್ಚೆ ನಡೆಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಉಚಿತ ಆನ್‌ಲೈನ್ ತರಬೇತಿ ಉಪಕ್ರಮವನ್ನು ಘೋಷಿಸಿದ್ದರು. ಇದೀಗ ಘೋಷಣೆಯಾದ ಕೆಲವೇ ದಿನಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚುರುಕಿನ ಕ್ರಮ ಕೈಗೊಂಡಿದೆ.
ಯೋಜನೆಯಡಿ ದೇಶಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕಾ ವಿಷಯ, ತಜ್ಞರ ಮಾರ್ಗದರ್ಶನ ಹಾಗೂ ರಚನಾತ್ಮಕ ಪರೀಕ್ಷಾ ಸಿದ್ಧತೆಯನ್ನು ಒದಗಿಸುವ ರಾಷ್ಟ್ರೀಯ ಮಟ್ಟದ ಆನ್‌ಲೈನ್ ವೇದಿಕೆಯನ್ನು ರೂಪಿಸುವತ್ತ ಗಮನ ಹರಿಸಲಾಗಿದೆ.
ಈ ಉಚಿತ ತರಬೇತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಖಾಸಗಿ ಕೋಚಿಂಗ್ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ. ಜೊತೆಗೆ, ಕುಟುಂಬಗಳ ಮೇಲಿನ ಕೋಚಿಂಗ್ ವೆಚ್ಚದ ಆರ್ಥಿಕ ಹೊರೆಯನ್ನೂ ಕಡಿಮೆ ಮಾಡಲು ಇದು ನೆರವಾಗಲಿದೆ.
ಯೋಜನೆಯ ಮೂಲಕ ಉನ್ನತ ಶಿಕ್ಷಣ, ಆಡಳಿತಾತ್ಮಕ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಅಧ್ಯಯನ ಸಾಮಗ್ರಿ ಮತ್ತು ತಜ್ಞರ ಮಾರ್ಗದರ್ಶನವನ್ನು ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳಿಗೆ ಸಮಾನವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.
ಸಭೆಯ ಬಳಿಕ ಪ್ರಲ್ಹಾದ್ ಜೋಶಿ ಅವರು, ದೇಶಾದ್ಯಂತದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕಲಿಕಾ ವಿಷಯ, ತಜ್ಞರ ಮಾರ್ಗದರ್ಶನ ಮತ್ತು ರಚನಾತ್ಮಕ ಸಿದ್ಧತೆಯನ್ನು ಒದಗಿಸುವ ಬಲಿಷ್ಠ ರಾಷ್ಟ್ರೀಯ ವೇದಿಕೆಯನ್ನು ನಿರ್ಮಿಸುವತ್ತ ಗಮನಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಯೋಜನೆ ಜಾರಿಯಾದರೆ UPSC, SSC, ಬ್ಯಾಂಕಿಂಗ್, ರೈಲ್ವೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ಯುವಕರಿಗೆ ಪ್ರಯೋಜನವಾಗುವ ಸಾಧ್ಯತೆಯಿದೆ







Comments