ದೆಹಲಿಯಲ್ಲಿ ಪ್ರತಿಭಟನೆಗೆ ಬ್ರೇಕ್? ಧ್ರುವ್ ರಾಠಿ ಸೇರಿ 150 ಮಂದಿ ಪೊಲೀಸ್ ವಶಕ್ಕೆ!

ನವದೆಹಲಿ: CJP ಸಂಘಟನೆಯ ಪ್ರತಿಭಟನೆಗೆ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಯೂಟ್ಯೂಬರ್ ಧ್ರುವ್ ರಾಠಿ ಸೇರಿದಂತೆ ಸುಮಾರು 150 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಗುರುಗ್ರಾಮದಲ್ಲಿರುವ ಧ್ರುವ್ ರಾಠಿ ಅವರ ನಿವಾಸಕ್ಕೆ 50ಕ್ಕೂ ಹೆಚ್ಚು ಪೊಲೀಸರು ತೆರಳಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ವರದಿಯಲ್ಲಿ ಉಲ್ಲೇಖವಾಗಿದೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದವರನ್ನು ತಡೆಯಲು ಪೊಲೀಸರು ಭಾರೀ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ.
ಬೆಳಗ್ಗೆ 9:35ರ ಸುಮಾರಿಗೆ ಕನ್ನಾಟ್ ಪ್ಲೇಸ್‌ನಲ್ಲಿ ಬ್ಯಾರಿಕೇಡ್‌ಗಳನ್ನು ದಾಟಿ ಜಂತರ್ ಮಂತರ್ ಕಡೆಗೆ ಸಾಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾ ಸ್ಥಳದ ಸುತ್ತ ಏಳು ಹಂತದ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದ್ದು, ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಪ್ರತಿಭಟನೆಯನ್ನು ನಿಯಂತ್ರಿಸಲು ದೆಹಲಿಯಾದ್ಯಂತ 20,000ಕ್ಕೂ ಹೆಚ್ಚು ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಮೆಟ್ರೋದ 45 ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದ್ದು, ಕೆಲವು ರೈಲುಗಳ ಸಂಚಾರಕ್ಕೂ ವ್ಯತ್ಯಯ ಉಂಟಾಗಿದೆ ಎನ್ನಲಾಗಿದೆ.
ಇನ್ನೊಂದೆಡೆ, ಪ್ರತಿಭಟನೆಗೆ ಅನುಮತಿ ನಿರಾಕರಿಸಿದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ. ಶಾಂತಿಯುತ ಪ್ರತಿಭಟನೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿರುವ ಅವರು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಪ್ರತಿಭಟನೆ ಆರಂಭಕ್ಕೂ ಮುನ್ನವೇ ದೆಹಲಿಯಲ್ಲಿ ಪೊಲೀಸ್ ಕ್ರಮ ತೀವ್ರಗೊಂಡಿದ್ದು, ರಾಜಧಾನಿಯಲ್ಲಿ ರಾಜಕೀಯ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.







Comments