ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಗುಡ್‌ಬೈ: ಜಿನೀವಾ ಕಚೇರಿಯಲ್ಲಿ ಯುಎಸ್ ಧ್ವಜ ತೆರವು, 98 ವರ್ಷಗಳ ನಂಟಿಗೆ ಬ್ರೇಕ್!

ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಅಮೆರಿಕ ಅಧಿಕೃತವಾಗಿ ಹೊರಬಂದಿದೆ. ಈ ನಿರ್ಧಾರದ ಬೆನ್ನಲ್ಲೇ ಜಿನೀವಾದಲ್ಲಿರುವ WHO ಕಚೇರಿಯಿಂದ ಅಮೆರಿಕದ ಧ್ವಜವನ್ನು ತೆರವುಗೊಳಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಸ್ಥೆಯು ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಅಗತ್ಯ ಸುಧಾರಣೆಗಳನ್ನು ತರುವಲ್ಲಿ ಮಂದಗತಿ ತೋರಿದೆ ಎಂದು ಗಂಭೀರವಾಗಿ ಆರೋಪಿಸಿರುವ ಅಮೆರಿಕ, ತನ್ನ ಸದಸ್ಯತ್ವವನ್ನು ರದ್ದುಗೊಳಿಸುವ ಮೂಲಕ ಕಠಿಣ ನಿರ್ಧಾರ ಕೈಗೊಂಡಿದೆ.
ಇನ್ನು ಮುಂದೆ ಅಮೆರಿಕವು ರೋಗಗಳ ಕಣ್ಗಾವಲು ಮತ್ತು ನಿರ್ಣಾಯಕ ಆರೋಗ್ಯ ಸವಾಲುಗಳ ಕುರಿತು ಇತರ ರಾಷ್ಟ್ರಗಳೊಂದಿಗೆ ನೇರ ಅಥವಾ ದ್ವಿಪಕ್ಷೀಯ ಸಹಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ. ವಿಶೇಷವೆಂದರೆ, ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೇವಲ 'ವೀಕ್ಷಕ ರಾಷ್ಟ್ರ'ವಾಗಿಯೂ ಮುಂದುವರಿಯಲು ತನಗೆ ಆಸಕ್ತಿಯಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಈ ನಿರ್ಧಾರವು ಜಾಗತಿಕ ಮಟ್ಟದಲ್ಲಿ ಆರೋಗ್ಯ ನೀತಿಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಆದಾಗ್ಯೂ, ಅಮೆರಿಕ ಮತ್ತು WHO ನಡುವಿನ ಈ ಬೇರ್ಪಡಿಕೆ ಪ್ರಕ್ರಿಯೆಗೆ ಆರ್ಥಿಕ ಬಾಕಿಗಳು ಅಡ್ಡಿಯಾಗಿವೆ. 2024 ಮತ್ತು 2025ರ ಸಾಲಿನ ಸದಸ್ಯತ್ವ ಶುಲ್ಕವಾಗಿ ಅಮೆರಿಕ ಇನ್ನೂ ಸುಮಾರು 260 ಮಿಲಿಯನ್ ಡಾಲರ್‌ಗಳನ್ನು ಪಾವತಿಸಬೇಕಿದೆ. ಈ ಬಾಕಿ ಹಣವನ್ನು ಪೂರ್ಣವಾಗಿ ಪಾವತಿಸದ ಹೊರತು ಸಂಪೂರ್ಣ ಬೇರ್ಪಡಿಕೆ ಸಾಧ್ಯವಿಲ್ಲ ಎಂದು WHO ವಕ್ತಾರರು ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಅತಿ ದೊಡ್ಡ ದಾನಿ ರಾಷ್ಟ್ರವಾಗಿದ್ದ ಅಮೆರಿಕದ ನಿರ್ಗಮನದಿಂದ ಆರೋಗ್ಯ ಸಂಸ್ಥೆಯ ಆರ್ಥಿಕ ಸ್ಥಿತಿಯ ಮೇಲೆ ಭಾರಿ ಹೊಡೆತ ಬೀಳುವ ಆತಂಕ ಎದುರಾಗಿದೆ.







Comments