ಬೆಳ್ತಂಗಡಿಯಲ್ಲಿ ಮಗನಿಂದ ತಂದೆಯ ಕೊಲೆ ಯತ್ನ: ಆರೋಪಿ ಬಂಧನ
- Apr 21
- 1 min read

ಕುಡಿದ ಮತ್ತಿನಲ್ಲಿ ಗಲಾಟೆ; ಕತ್ತಿಯಿಂದ ಹಲ್ಲೆ – ತಂದೆ ಆಸ್ಪತ್ರೆಗೆ ದಾಖಲು
ವರದಿ | ಬೆಳ್ತಂಗಡಿ:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದಲ್ಲಿ ಮಗನೊಬ್ಬ ತನ್ನ ತಂದೆಯ ಮೇಲೆ ಕೊಲೆ ಯತ್ನ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಕುಡಿದ ಮತ್ತಿನಲ್ಲಿ ನಡೆದ ಗಲಾಟೆ ಈ ದುರಂತಕ್ಕೆ ಕಾರಣವಾಗಿದೆ.

ಉಜಿರೆ ಗ್ರಾಮದ ಮಣಿಕೆ ನಿವಾಸಿಯಾದ ಗಾರೆ ಕೆಲಸಗಾರ ನಾರಾಯಣ (52) ಹಾಗೂ ಟಿಂಬರ್ ಕೆಲಸ ಮಾಡುತ್ತಿದ್ದ ಪುತ್ರ ಭರತ್ (25) ನಡುವೆ ಏಪ್ರಿಲ್ 19ರಂದು ರಾತ್ರಿ ಸುಮಾರು 7:30 ಗಂಟೆ ಸುಮಾರಿಗೆ ಮನೆಯಲ್ಲೇ ವಾಗ್ವಾದ ಉಂಟಾಯಿತು. ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೋಪೋದ್ರಿಕ್ತನಾದ ಭರತ್ ಮನೆಯ ಹೊರಭಾಗದಲ್ಲಿದ್ದ ತಂದೆ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.
ಈ ದಾಳಿಯಲ್ಲಿ ನಾರಾಯಣ ಅವರ ಕುತ್ತಿಗೆ ಹಾಗೂ ಕೈ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾದ ಭರತ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.







Comments