ರೈಲಿನಲ್ಲಿ ಹೆರಿಗೆ: ಪ್ರಯಾಣಿಕ ಮಹಿಳೆಯರ ಸಾಹಸ – ತಾಯಿ, ಮಗು ಸುರಕ್ಷಿತ
- Apr 27
- 1 min read

ಬಂಟ್ವಾಳ (ಬಿ.ಸಿ.ರೋಡ್), ಏ.27:
ಮಂಗಳೂರುದಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿ ಮಹಿಳೆಗೆ ತುರ್ತು ಹೆರಿಗೆ ನಡೆಸಿದ ಘಟನೆ ಭಾನುವಾರ ಮುಸ್ಸಂಜೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಮೀಪ ನಡೆದಿದೆ.

ಮೈಸೂರು ಮೂಲದ ತುಂಬು ಗರ್ಭಿಣಿ ಮಹಿಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ. ರೈಲು ಬಿ.ಸಿ.ರೋಡ್ ತಲುಪುವಷ್ಟರಲ್ಲಿ ಆಕೆಗೆ ತೀವ್ರ ರಕ್ತಸ್ರಾವವೂ ಉಂಟಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಇದರಿಂದಾಗಿ ರೈಲನ್ನು ತಕ್ಷಣ ನಿಲ್ಲಿಸಿ, ವೈದ್ಯಕೀಯ ನೆರವಿಗಾಗಿ ಸುಮಾರು 30 ನಿಮಿಷಗಳ ಕಾಲ ಕಾಯಲಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ವೈದ್ಯರು ಲಭ್ಯವಾಗದ ಹಿನ್ನೆಲೆಯಲ್ಲಿ, ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಮಹಿಳೆಯರು ಧೈರ್ಯದಿಂದ ಮುಂದಾಗಿ ಹೆರಿಗೆ ಪ್ರಕ್ರಿಯೆಯನ್ನು ನಡೆಸಿದರು.
ಅವರ ಸಮಯೋಚಿತ ಕ್ರಮದಿಂದ ಮಹಿಳೆಗೆ ಸುರಕ್ಷಿತವಾಗಿ ಸಹಜ ಹೆರಿಗೆ ನಡೆದಿದ್ದು, ತಾಯಿ ಮತ್ತು ಮಗು ಇಬ್ಬರೂ ಸುಸ್ಥಿತಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಪ್ರಯಾಣಿಕರ ಮಾನವೀಯತೆ ಮತ್ತು ಧೈರ್ಯಕ್ಕೆ ನಿದರ್ಶನವಾಗಿದ್ದು, ಹೆರಿಗೆ ನೆರವು ನೀಡಿದ ಮಹಿಳೆಯರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.







Comments