ಸುಳ್ಯ: ಕ್ಷುಲ್ಲಕ ಕಾರಣಕ್ಕೆ ಮಗನ ಮೇಲೆ ತಾಯಿಯಿಂದ ಕತ್ತಿ ಇರಿತ

ಸುಳ್ಯ ತಾಲೂಕಿನ ಎಮರ್ಕಂಜ ಗ್ರಾಮದ ಹೈದಂಗೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ತಾಯಿ ಯಶೋದಾ ಎಂಬುವವರು ಮಗ ರಾಮಚಂದ್ರನಿಗೆ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಏಪ್ರಿಲ್ 26ರಂದು ರಾತ್ರಿ ಮಗ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದಾಗ ತಾಯಿ-ಮಗನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಆಕ್ರೋಶಗೊಂಡ ತಾಯಿ ಈ ಕೃತ್ಯ ಎಸಗಿದ್ದಾರೆ.

ಕತ್ತಿ ಏಟಿನಿಂದ ತೀವ್ರ ರಕ್ತಸ್ರಾವಕ್ಕೊಳಗಾದ ರಾಮಚಂದ್ರ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಮಲು ಪದಾರ್ಥದ ವ್ಯಸನವು ಒಂದು ಕುಟುಂಬದಲ್ಲಿ ಇಂತಹ ಭೀಕರ ದುರಂತಕ್ಕೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.







Comments