ಹೂಡಿಕೆದಾರರಿಗೆ ಬಂಪರ್ ಆಫರ್: ದಿಢೀರ್ ಕುಸಿತ ಕಂಡ ಚಿನ್ನ ಮತ್ತು ಬೆಳ್ಳಿ ದರ!
- sathyapathanewsplu
- 2 days ago
- 1 min read

ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಶುಕ್ರವಾರ ಭಾರಿ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ದೊಡ್ಡ ಮಟ್ಟದ ಸಮಾಧಾನ ತಂದಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ಬರೋಬ್ಬರಿ ₹14,000 ಹಾಗೂ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ₹20,000 ರಷ್ಟು ಇಳಿಕೆಯಾಗಿದೆ. ಈ ದಿಢೀರ್ ಬದಲಾವಣೆಯು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ ಡಾಲರ್ ಮೌಲ್ಯ ಚೇತರಿಕೆ ಕಂಡಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣ. ಇದರೊಂದಿಗೆ, ಬೆಲೆ ಗರಿಷ್ಠ ಮಟ್ಟದಲ್ಲಿದ್ದಾಗ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ದೊಡ್ಡ ಸಾಂಸ್ಥಿಕ ಹೂಡಿಕೆದಾರರು ತಮ್ಮಲ್ಲಿದ್ದ ಚಿನ್ನ ಮತ್ತು ಬೆಳ್ಳಿಯನ್ನು ದೊಡ್ಡ ಮಟ್ಟದಲ್ಲಿ ಮಾರಾಟ ಮಾಡಿ ನಗದೀಕರಣಕ್ಕೆ ಮುಂದಾಗಿದ್ದಾರೆ.
ಇಂದಿನ ವಹಿವಾಟಿನಲ್ಲಿ ಚಿನ್ನದ ದರ ಶೇ. 7.65ರಷ್ಟು ಕುಸಿದು ₹1.69 ಲಕ್ಷಕ್ಕೆ (10 ಗ್ರಾಂ) ತಲುಪಿದ್ದರೆ, ಬೆಳ್ಳಿ ದರ ಶೇ. 5ರಷ್ಟು ಇಳಿಕೆಯಾಗಿ ಪ್ರತಿ ಕೆ.ಜಿ.ಗೆ ₹3,84,500 ಆಗಿದೆ. "ಹೂಡಿಕೆದಾರರ ಲಾಭದ ನಗದೀಕರಣ ಮತ್ತು ಬಲಗೊಂಡ ಡಾಲರ್ ಮೌಲ್ಯವು ಬೆಲೆ ಇಳಿಕೆಗೆ ಪುಷ್ಟಿ ನೀಡಿದೆ" ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ. ಮದುವೆ ಸೀಸನ್ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ದರ ಇಳಿಕೆಯಾಗಿರುವುದು ಜನಸಾಮಾನ್ಯರಿಗೆ ವರದಾನವಾಗಿದೆ.






Comments