;
top of page

ಡಿಜಿಟಲ್ ವಂಚನೆ: ಬ್ಯಾಂಕ್‌ಗಳ ನಿರ್ಲಕ್ಷ್ಯ ಸಾಬೀತಾದರೆ ಸಂತ್ರಸ್ತರಿಗೆ ಪರಿಹಾರ ನೀಡುವುದು ಕಡ್ಡಾಯ- ಸುಪ್ರೀಂ ಕೋರ್ಟ್

4 hours ago
1 min read

ನವದೆಹಲಿ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ಅಪರಾಧ ಹಾಗೂ 'ಡಿಜಿಟಲ್ ಅರೆಸ್ಟ್' ವಂಚನೆಗಳಿಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಬ್ಯಾಂಕ್‌ಗಳ ನಿರ್ಲಕ್ಷ್ಯದಿಂದ ಗ್ರಾಹಕರು ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿಕೆಯನ್ನು ಕಡ್ಡಾಯಗೊಳಿಸುವುದಾಗಿ ತಿಳಿಸಿದೆ.

ಡಿಜಿಟಲ್ ವಂಚನೆಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಪ್ರಮುಖ ಅಭಿಪ್ರಾಯ ವ್ಯಕ್ತಪಡಿಸಿದೆ. "ಗ್ರಾಹಕರ ಖಾತೆಯಿಂದ ಇದ್ದಕ್ಕಿದ್ದಂತೆ ಅನುಮಾನಾಸ್ಪದ ರೀತಿಯಲ್ಲಿ ದೊಡ್ಡ ಮೊತ್ತದ ಹಣ ವರ್ಗಾವಣೆಯಾದಾಗ ಅಥವಾ ವಿತ್‌ಡ್ರಾ ಆದಾಗ ಅದನ್ನು ಗುರುತಿಸಿ ತಡೆಯುವುದು ಬ್ಯಾಂಕ್‌ಗಳ ಮೂಲಭೂತ ಕರ್ತವ್ಯ. ಹಣಕಾಸು ಸಂಸ್ಥೆಗಳು ತಮ್ಮ ಜವಾಬ್ದಾರಿಯಲ್ಲಿ ವಿಫಲವಾದರೆ ಸಂತ್ರಸ್ತರಿಗೆ ಪರಿಹಾರ ನೀಡಲೇಬೇಕು" ಎಂದು ಪೀಠವು ಖಡಕ್ ಆಗಿ ತಿಳಿಸಿದೆ.

ಇದೇ ವೇಳೆ ವಿದ್ಯಾವಂತ ನಾಗರಿಕರೂ 'ಡಿಜಿಟಲ್ ಅರೆಸ್ಟ್' ಹೆಸರಿನ ವಂಚನೆಗೆ ತುತ್ತಾಗುತ್ತಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ಸಾರ್ವಜನಿಕರು ಭಯದ ಮನಸ್ಥಿತಿಯಿಂದ ಹೊರಬಂದು ಜಾಗೃತರಾಗಬೇಕು ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, "ಸರ್ಕಾರ ಕೈಗೊಂಡ ಜಾಗೃತಿ ಅಭಿಯಾನ ಹಾಗೂ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಶೇ. 50 ರಷ್ಟು ಕಡಿಮೆಯಾಗಿವೆ" ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಆದಾಗ್ಯೂ, ಈ ವರ್ಷವೂ ದೇಶದಲ್ಲಿ ಸೈಬರ್ ವಂಚನೆಯಿಂದ ಸುಮಾರು 800 ಕೋಟಿ ರೂ. ನಷ್ಟ ಸಂಭವಿಸಿದ್ದು, ಬ್ಯಾಂಕ್‌ಗಳ ಹೊಣೆಗಾರಿಕೆ ಮತ್ತು 'ಮ್ಯೂಲ್ ಖಾತೆಗಳ' ತಡೆಗೆ ಹೆಚ್ಚಿನ ಹಸ್ತಕ್ಷೇಪದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮುಂದಿನ ವಿಚಾರಣೆಯೊಳಗೆ ದೇಶದ ಎಲ್ಲಾ ಅಧಿಕೃತ ಹಣಕಾಸು ಸಂಸ್ಥೆಗಳ ಪಟ್ಟಿಯನ್ನು ಸಲ್ಲಿಸುವಂತೆ ಆರ್‌ಬಿಐಗೆ (RBI) ನಿರ್ದೇಶಿಸಿರುವ ಪೀಠವು, ಹಣಕಾಸು ಸಂಸ್ಥೆಗಳ ಕರ್ತವ್ಯ ಲೋಪಕ್ಕೆ ಪರಿಹಾರ ಒದಗಿಸುವ 'ಕೆವೈಸಿ ತಿದ್ದುಪಡಿ ನಿರ್ದೇಶನಗಳು 2026' ಅನ್ನು ಪರಿಶೀಲಿಸುವುದಾಗಿ ತಿಳಿಸಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page