ಶಿವಮೊಗ್ಗ: ಖಮೇನಿ ಹತ್ಯೆ ಖಂಡಿಸಿ ಶಿಯಾ ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರತಿಭಟನೆ- 'ನೂರು ಮಕ್ಕಳನ್ನಾದರೂ ಹೆರುತ್ತೇವೆ, ಶರಣಾಗುವುದಿಲ್ಲ'

ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾಗಿರುವುದನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಶಿಯಾ ಮುಸ್ಲಿಂ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು. ಇರಾನ್‌ನಲ್ಲಿ ಅಲ್ಲಿನ ಪ್ರಜೆಗಳು ಈ ಬೆಳವಣಿಗೆಯನ್ನು ಸಂಭ್ರಮಿಸುತ್ತಿದ್ದರೆ, ಇಲ್ಲಿನ ಸಮುದಾಯದವರು ತೀವ್ರ ದುಃಖ ಮತ್ತು ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ವಿಶೇಷವಾಗಿ ಕಂಡುಬಂದಿದೆ.
ಪ್ರತಿಭಟನೆಯ ವೇಳೆ ಆಕ್ರೋಶಭರಿತ ಹೇಳಿಕೆ ನೀಡಿದ ಮಹಿಳೆಯೊಬ್ಬರು, ಖಮೇನಿ ಹತ್ಯೆಯನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. "ಅವರು ಎಷ್ಟು ಜನರನ್ನು ಸಾಯಿಸಿದರೂ ನಾವು ಶರಣಾಗುವುದಿಲ್ಲ. ನಮ್ಮ ರಕ್ತದಲ್ಲಿ ಬಲಿದಾನದ ಗುಣವಿದೆ. ಒಂದೊಂದು ಮನೆಯಿಂದ ನಾವು ನೂರು ಮಕ್ಕಳನ್ನು ಹುಟ್ಟಿಸುತ್ತೇವೆ, ಆದರೆ ಸೋಲೊಪ್ಪುವುದಿಲ್ಲ" ಎಂದು ಭಾವೋದ್ವೇಗದಿಂದ ನುಡಿದರು.
ನಾವು ಹುಸೇನಿಯಾಗಿ ಬದುಕುತ್ತೇವೆ ಮತ್ತು ಹುಸೇನಿಯಾಗಿಯೇ ಸಾಯುತ್ತೇವೆ ಎಂದು ಘೋಷಿಸಿದ ಪ್ರತಿಭಟನಾಕಾರರು, ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿದರು. ಈ ಪ್ರತಿಭಟನೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಕಾರಣ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.







Comments