ಹುಟ್ಟುಹಬ್ಬದ ಪಾರ್ಟಿಯಲ್ಲಿ ದುರಂತ; ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

ಶಿವಮೊಗ್ಗ ಜಿಲ್ಲೆಯ ಕುಂಸಿ ಸಮೀಪದ ಚೆನ್ನಹಳ್ಳಿ ಗ್ರಾಮದಲ್ಲಿ ಹುಟ್ಟುಹಬ್ಬದ ಸಂಭ್ರಮವು ದುರಂತದಲ್ಲಿ ಅಂತ್ಯಗೊಂಡಿದೆ. ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 21 ವರ್ಷದ ಸಚಿನ್ ಎಂಬ ಯುವಕ, ಊಟದ ವೇಳೆ ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಅಕಾಲಿಕ ಮರಣಕ್ಕೀಡಾಗಿದ್ದಾನೆ. ಪಾರ್ಟಿ ಮುಗಿಸಿ ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ತೆರಳಿದ್ದ ಯುವಕ, ಮರುದಿನ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಧಾವಿಸಿದ ಕುಂಸಿ ಪೊಲೀಸರು ತನಿಖೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ರಹಸ್ಯ ಬಯಲಾಗಿದೆ. ಸಚಿನ್ ಮದ್ಯಪಾನ ಮಾಡಿದ್ದರಿಂದ ಆಹಾರ ಗಂಟಲಲ್ಲಿ ಸಿಲುಕಿದಾಗ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಹಠಾತ್ ಸಾವು ಕುಟುಂಬಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.







Comments