ಗ್ಯಾಸ್ ಅಭಾವದ ಬೆನ್ನಲ್ಲೇ ಮಿತಿಮೀರಿದ ಕಳ್ಳರ ಹಾವಳಿ: ಶಾಲೆಗಳ ಬಿಸಿಯೂಟದ ಸಿಲಿಂಡರ್‌ಗಳಿಗೂ ಬಿತ್ತು ಕನ್ನ!
- Mar 24
- 1 min read

ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಗ್ಯಾಸ್ ಸಿಲಿಂಡರ್ ಕಳ್ಳರ ಹಾವಳಿ ಮಿತಿಮೀರಿದೆ. ಹೋಟೆಲ್ ಉದ್ಯಮ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಕಳ್ಳತನ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸಿವೆ. ಇತ್ತೀಚೆಗೆ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಅಡುಗೆ ಕೋಣೆಯ ಬೀಗ ಮುರಿದು, ಮಧ್ಯಾಹ್ನದ ಬಿಸಿಯೂಟಕ್ಕಾಗಿ ಇಟ್ಟಿದ್ದ ಆರು ಸಿಲಿಂಡರ್‌ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ಸಂಬಂಧ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳ್ಳತನದ ಸರಣಿ ಮುಂದುವರೆದಿದ್ದು, ಭಾಲ್ಕಿ ಪ್ರದೇಶದಲ್ಲಿ ಸಿಲಿಂಡರ್ ಖರೀದಿಸಲು ಗೋದಾಮಿಗೆ ತೆರಳಿದ್ದ ಮಲ್ಲಿಕಾರ್ಜುನ ಕಾಂತಪ್ಪ ಎಂಬುವವರ ಗಮನ ಬೇರೆಡೆ ಸೆಳೆದು ಅಪರಿಚಿತ ವ್ಯಕ್ತಿಯೊಬ್ಬ ಸಿಲಿಂಡರ್ ಕಳವು ಮಾಡಿದ್ದಾನೆ. ಮಾರ್ಚ್ 14 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಸಿ ಲೇಔಟ್‌ನ ಸಾಯಿ ಅಪಾರ್ಟ್‌ಮೆಂಟ್‌ನಲ್ಲಿ ಯುಗಾದಿ ಹಬ್ಬದ ದಿನವೇ ಹೆಲ್ಮೆಟ್ ಧರಿಸಿದ ಇಬ್ಬರು ಖದೀಮರು ಸ್ಕೂಟರ್‌ನಲ್ಲಿ ಬಂದು ಎರಡು ಸಿಲಿಂಡರ್‌ಗಳನ್ನು ಕದ್ದಿದ್ದಾರೆ.
ಸಿಲಿಂಡರ್ ಕೊರತೆಯ ಲಾಭ ಪಡೆಯುತ್ತಿರುವ ಕಿಡಿಗೇಡಿಗಳು ಹಾಡಹಗಲೇ ಅಪಾರ್ಟ್‌ಮೆಂಟ್ ಮತ್ತು ಶಾಲೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಗ್ಯಾಸ್ ಸಿಲಿಂಡರ್‌ಗಳ ಬೆಲೆ ಏರಿಕೆ ಮತ್ತು ಪೂರೈಕೆಯ ಅಭಾವದ ನಡುವೆ ಇಂತಹ ಕೃತ್ಯಗಳು ನಡೆಯುತ್ತಿರುವುದು ಸಾರ್ವಜನಿಕರನ್ನು ಮತ್ತಷ್ಟು ಹೈರಾಣಾಗಿಸಿದೆ. ಬಡ ಮಕ್ಕಳ ಬಿಸಿಯೂಟದ ಸಿಲಿಂಡರ್‌ಗಳನ್ನೂ ಬಿಡದ ಕಳ್ಳರ ಅಮಾನವೀಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪೊಲೀಸರು ಬಿಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ.







Comments