ನಿವೃತ್ತ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್: ₹5 ಲಕ್ಷದವರೆಗೆ ನಗದುರಹಿತ ಚಿಕಿತ್ಸೆ; ‘ಸಂಧ್ಯಾ ಕಿರಣ’ ಆರೋಗ್ಯ ಯೋಜನೆಗೆ ಸರ್ಕಾರದ ಅನುಮೋದನೆ

ಬೆಂಗಳೂರು, ಸೆ.3: ರಾಜ್ಯದ ಸರ್ಕಾರಿ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರಿಗೆ ಕರ್ನಾಟಕ ಸರ್ಕಾರ ಮಹತ್ವದ ಆರೋಗ್ಯ ಸೌಲಭ್ಯವನ್ನು ಘೋಷಿಸಿದೆ. 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ನಿಯಮಿತ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಪಿಂಚಣಿದಾರರ ಅವಲಂಬಿತ ದಿವ್ಯಾಂಗ ಮಕ್ಕಳಿಗೆ ವಾರ್ಷಿಕ ₹5 ಲಕ್ಷದವರೆಗೆ ನಗದುರಹಿತ ಆರೋಗ್ಯ ಸೇವೆ ಒದಗಿಸುವ ‘ಸಂಧ್ಯಾ ಕಿರಣ’ ಆರೋಗ್ಯ ಯೋಜನೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಆದೇಶದಂತೆ, ಈ ಯೋಜನೆಯನ್ನು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (AB-ArK) ಯೋಜನೆಯಡಿ APL ನೀತಿಯನ್ವಯ ಅನುಷ್ಠಾನಗೊಳಿಸಲಾಗುತ್ತದೆ.
ಯಾರಿಗೆ ಸೌಲಭ್ಯ?
70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ನಿಯಮಿತ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಪಿಂಚಣಿದಾರರ ಪತಿ ಅಥವಾ ಪತ್ನಿಗೂ ಸೌಲಭ್ಯ ಲಭ್ಯವಾಗಲಿದೆ. ಇದರ ಜೊತೆಗೆ, ಪಿಂಚಣಿದಾರರ ಅವಲಂಬಿತ ದಿವ್ಯಾಂಗ ಮಕ್ಕಳನ್ನೂ ಯೋಜನೆಯಡಿ ಪರಿಗಣಿಸಲಾಗಿದೆ.
ಕುಟುಂಬಕ್ಕೆ ₹5 ಲಕ್ಷದವರೆಗೆ ನಗದುರಹಿತ ಚಿಕಿತ್ಸೆ
ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ ₹5 ಲಕ್ಷದವರೆಗೆ ನಗದುರಹಿತ ಆರೋಗ್ಯ ಸೇವೆ ಪಡೆಯಲು ಅವಕಾಶವಿದೆ. AB-ArK ಯೋಜನೆಯಡಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ರೆಫರಲ್ ಆಧಾರದ ಮೇಲೆ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆ, ಒಳರೋಗಿ ಮತ್ತು ತುರ್ತು ಚಿಕಿತ್ಸಾ ಸೇವೆಗಳನ್ನು ಪಡೆಯಬಹುದಾಗಿದೆ.
ಪಿಂಚಣಿದಾರರು ಪಾವತಿಸಬೇಕಾದ ವಂತಿಕೆ ಎಷ್ಟು?
‘ಸಂಧ್ಯಾ ಕಿರಣ’ ಯೋಜನೆಯು ವಂತಿಕೆ ಆಧಾರಿತವಾಗಿದ್ದು, ಅರ್ಹ ನಿಯಮಿತ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯ ಶೇ.1.25ರಷ್ಟು ವಂತಿಕೆ ನೀಡಬೇಕು. ಕುಟುಂಬ ಪಿಂಚಣಿದಾರರು ಮೂಲ ಪಿಂಚಣಿಯ ಶೇ.0.75ರಷ್ಟು ವಂತಿಕೆ ಪಾವತಿಸಬೇಕಾಗುತ್ತದೆ.
ಯೋಜನೆಯಡಿ ಒಟ್ಟು ಚಿಕಿತ್ಸಾ ವೆಚ್ಚದಲ್ಲಿ ಶೇ.70ರಷ್ಟು ಪಿಂಚಣಿದಾರರಿಂದ ಸಂಗ್ರಹವಾಗುವ ವಂತಿಕೆ ನಿಧಿಯಿಂದ ಹಾಗೂ ಉಳಿದ ಶೇ.30ರಷ್ಟು ಸರ್ಕಾರದ ಪಾಲಿನಿಂದ ಭರಿಸಲಾಗುತ್ತದೆ.
ಬಳಕೆ ಹೆಚ್ಚಾದರೆ ವಂತಿಕೆ ಹೆಚ್ಚಳ
ಯೋಜನೆಯ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಬಳಕೆ ಪ್ರಮಾಣವು ಒಟ್ಟು ಸಂಗ್ರಹಿತ ನಿಧಿಯ ಶೇ.85ಕ್ಕಿಂತ ಹೆಚ್ಚಾದರೆ, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಂದ ಸಂಗ್ರಹಿಸುವ ವಂತಿಕೆಯನ್ನು ಶೇ.0.05ರಷ್ಟು ಸ್ವಯಂಚಾಲಿತವಾಗಿ ಹೆಚ್ಚಿಸುವ ವ್ಯವಸ್ಥೆ ಮಾಡಲಾಗಿದೆ.
ಯೋಜನೆಯಡಿ SAST ಸಂಸ್ಥೆ ನಿಧಿ ಬಳಸುವ ಸಂದರ್ಭದಲ್ಲಿ ಶೇ.2ರ ಆಡಳಿತ ವೆಚ್ಚ ಒಳಗೊಂಡಿರಲಿದೆ.
ನೋಂದಣಿಗೆ ಮೂರು ತಿಂಗಳ ಗಡುವು
ಈಗಾಗಲೇ ನಿವೃತ್ತರಾಗಿರುವ ಹಾಗೂ ಯೋಜನೆಗೆ ವಂತಿಕೆ ನೀಡಲು ಇಚ್ಛಿಸುವ ಪಿಂಚಣಿದಾರರಿಗೆ ನೋಂದಣಿಗಾಗಿ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ನಿವೃತ್ತಿಯಾಗುವ ಪಿಂಚಣಿದಾರರು ನಿವೃತ್ತಿಯಾದ ದಿನಾಂಕದಿಂದ ಎರಡು ತಿಂಗಳೊಳಗೆ ನೋಂದಾಯಿಸಿಕೊಳ್ಳಬೇಕು. ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಕೊಳ್ಳದಿದ್ದರೆ ಯೋಜನೆಯ ಸೌಲಭ್ಯ ಪಡೆಯಲು ಅನರ್ಹರಾಗುವ ಸಾಧ್ಯತೆ ಇದೆ.
ಸರ್ಕಾರದ ಪಾಲು ಬಿಡುಗಡೆಗೆ ಷರತ್ತು
ಯೋಜನೆಯ ಒಟ್ಟು ನಿಧಿಯು ಅದರ ವಾರ್ಷಿಕ ಬಳಕೆಯ ಮಟ್ಟದ ಶೇ.80ರಷ್ಟನ್ನು ತಲುಪಿದಾಗ ಮಾತ್ರ ರಾಜ್ಯ ಸರ್ಕಾರದ ವಾರ್ಷಿಕ ಪಾಲನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಯೋಜನೆಯ ಅನುಷ್ಠಾನ, ಆರೋಗ್ಯ ಸೇವೆಗಳ ಬಳಕೆ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಹೊಸ ಚಿಕಿತ್ಸಾ ವಿಧಾನಗಳನ್ನು ಸೇರ್ಪಡೆಗೊಳಿಸುವುದು ಸೇರಿದಂತೆ ಯೋಜನೆಯ ನೀತಿಯಲ್ಲಿ ಬದಲಾವಣೆಗಳನ್ನು ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆರ್ಥಿಕ ಇಲಾಖೆಗೆ ಅವಕಾಶ ನೀಡಲಾಗಿದೆ.
ಸರ್ಕಾರದ ಆದೇಶ
ಆರ್ಥಿಕ ಇಲಾಖೆಯ ಸಹಮತಿ ಮತ್ತು ಸಚಿವ ಸಂಪುಟದ ಅನುಮೋದನೆಯ ಆಧಾರದ ಮೇಲೆ ‘ಸಂಧ್ಯಾ ಕಿರಣ’ ಆರೋಗ್ಯ ಯೋಜನೆಗೆ ಚಾಲನೆ ನೀಡಲಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಆಕುಕ 287 ಸಿಜಿಇ 2026, ದಿನಾಂಕ: 02-09-2026ರಂತೆ ಆದೇಶ ಹೊರಡಿಸಲಾಗಿದೆ.
ನೂತನ ಯೋಜನೆಯಿಂದ ರಾಜ್ಯದ ಅರ್ಹ ಸರ್ಕಾರಿ ಪಿಂಚಣಿದಾರರು ಮತ್ತು ಅವರ ಕುಟುಂಬ ಸದಸ್ಯರಿಗೆ ದುಬಾರಿ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆಯ ಸಂದರ್ಭದಲ್ಲಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.







Comments