ಪತ್ನಿ ಜೊತೆ ಮಾತನಾಡುತ್ತಲೇ ಕೊನೆಯುಸಿರೆಳೆದ ಪತಿ: ರಿಯಾದ್ ಕ್ಷಿಪಣಿ ದಾಳಿಗೆ ಭಾರತ ಮೂಲದ ಯುವಕ ಬಲಿ

ರಿಯಾದ್‌ನಲ್ಲಿ ನಡೆದ ಭೀಕರ ಕ್ಷಿಪಣಿ ದಾಳಿಗೆ ಉತ್ತರ ಪ್ರದೇಶದ ಸೀತಾಪುರ ಮೂಲದ ರವಿ ಗೋಪಾಲ್ (26) ಬಲಿಯಾಗಿದ್ದಾರೆ. ಕಳೆದ ಸೆಪ್ಟೆಂಬರ್‌ನಿಂದ ಸೌದಿ ಅರೇಬಿಯಾದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಇವರು, ಮಾರ್ಚ್ 18ರ ಬುಧವಾರ ರಾತ್ರಿ ತಮ್ಮ ಪತ್ನಿ ರಿತು ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ. ಸುಮಾರು 20 ನಿಮಿಷಗಳ ಕಾಲ ಸಂಭಾಷಣೆ ನಡೆಸುತ್ತಿದ್ದ ವೇಳೆ ಏಕಾಏಕಿ ದೊಡ್ಡ ಸ್ಫೋಟದ ಸದ್ದು ಕೇಳಿ ಫೋನ್ ಕರೆ ಕಡಿತಗೊಂಡಿದ್ದು, ಕುಟುಂಬಸ್ಥರಲ್ಲಿ ಆತಂಕ ಮೂಡಿಸಿತ್ತು.

ಸೌದಿ ಅರೇಬಿಯಾವು ರಿಯಾದ್ ಗುರಿಯಾಗಿಸಿಕೊಂಡಿದ್ದ ಇರಾನ್‌ನ ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಿತ್ತು. ದುರದೃಷ್ಟವಶಾತ್, ಆ ಕ್ಷಿಪಣಿಗಳ ಅವಶೇಷಗಳು ರವಿ ಕೆಲಸ ಮಾಡುತ್ತಿದ್ದ ಪ್ಲಾಸ್ಟಿಕ್ ಫ್ಯಾಕ್ಟರಿಯ ಮೇಲೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರವಿ ತಮ್ಮ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದು, ಇವರಿಗೆ ನಾಲ್ಕು ವರ್ಷದ ಪುಟ್ಟ ಮಗನಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಬಾಫೈನ್ ಗ್ರಾಮದ ಅವರ ನಿವಾಸದಲ್ಲಿ ಈಗ ಶೋಕ ಸಾಗರವೇ ಆವರಿಸಿದ್ದು, ಕುಟುಂಬದವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
ಪ್ರಸ್ತುತ ರವಿ ಅವರ ಮೃತದೇಹವನ್ನು ಸ್ವದೇಶಕ್ಕೆ ತರಲು ಕುಟುಂಬವು ತೀವ್ರ ಹೆಣಗಾಡುತ್ತಿದೆ. ಈ ಕುರಿತು ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು, ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ. ಬಡ ಕುಟುಂಬಕ್ಕೆ ಆಸರೆಯಾಗಿದ್ದ ಯುವಕನ ಮೃತದೇಹವನ್ನು ಅಂತಿಮ ದರ್ಶನಕ್ಕಾಗಿ ಭಾರತಕ್ಕೆ ತರಲು ಸರ್ಕಾರವು ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂ ಕುಟುಂಬದವರು ಒತ್ತಾಯಿಸಿದ್ದಾರೆ.







Comments