ಪುತ್ತೂರಿನಲ್ಲಿ ಅಪರೂಪದ ಆಚರಣೆ: 25 ವರ್ಷಗಳ ಹಿಂದೆ ಮೃತಪಟ್ಟ ಜೋಡಿಗೆ ‘ಪ್ರೇತ ವಿವಾಹ’!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಂಡೂರಿನಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಚರಣೆಯಾದ ಅಪರೂಪದ ‘ಪ್ರೇತ ವಿವಾಹ’ ನಡೆದಿದೆ. ಸುಮಾರು 25 ವರ್ಷಗಳ ಹಿಂದೆ ಬಾಲ್ಯದಲ್ಲೇ ಮೃತಪಟ್ಟಿದ್ದ ಆನಂದ ಮತ್ತು ಸರೋಜಾ ಎಂಬವರ ಆತ್ಮಗಳಿಗೆ ಶಾಂತಿ ಸಿಗಲಿ ಹಾಗೂ ಕುಟುಂಬದ ದೋಷಗಳು ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಈ ವಿಶಿಷ್ಟ ವಿವಾಹವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗಿದೆ.
ಮೃತ ಆನಂದ ಅವರ ಕುಟುಂಬದಲ್ಲಿ ಸಂತಾನ ಭಾಗ್ಯದ ಕೊರತೆ ಹಾಗೂ ವಿವಾಹ ತಡೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಜ್ಯೋತಿಷಿಗಳ ಸಲಹೆಯಂತೆ ‘ಪ್ರಶ್ನಾ ಚಿಂತನೆ’ ನಡೆಸಿದಾಗ, ಮದುವೆಯಾಗದೆ ಮೃತಪಟ್ಟ ಆನಂದನ ಅತೃಪ್ತ ಆತ್ಮವೇ ಇದಕ್ಕೆ ಕಾರಣ ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ, ಕುಟುಂಬದ ಹಿರಿಯರೆಲ್ಲರೂ ಸೇರಿ ಆನಂದನಿಗೆ ಆತನ ಸೋದರಸಂಬಂಧಿ, ಎಳವೆಯಲ್ಲೇ ನಿಧನರಾಗಿದ್ದ ಸರೋಜಾ ಅವರ ಆತ್ಮದೊಂದಿಗೆ ಮದುವೆ ಮಾಡಲು ನಿರ್ಧರಿಸಿದರು.
ಮುಂಡೂರು ಬಾರಿಕೆಯಲ್ಲಿ ನಡೆದ ಈ ಧಾರ್ಮಿಕ ಸಮಾರಂಭದ ಪೌರೋಹಿತ್ಯವನ್ನು ಧರ್ಮಪಾಲ ಶೇಣಿ ವಹಿಸಿದ್ದರು. ಕುಟುಂಬಸ್ಥರು ಮೃತರ ಪ್ರತಿನಿಧಿಗಳಾಗಿ ಪಾಲ್ಗೊಂಡು ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಿದರು. ಪೂರ್ವಜರ ಈ ಆಚರಣೆಗಳ ಹಿಂದೆ ಆಧ್ಯಾತ್ಮಿಕ ಸತ್ಯವಿದ್ದು, ಇದರಿಂದ ಕುಟುಂಬಕ್ಕೆ ನೆಮ್ಮದಿ ಸಿಗುತ್ತದೆ ಎಂದು ಸದಸ್ಯರು ನಂಬಿದ್ದಾರೆ. ವಿವಾಹದ ಬಳಿಕ ನೆಂಟರಿಷ್ಟರಿಗೆ ಅದ್ಧೂರಿ ಮದುವೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.







Comments