ಪುತ್ತೂರು: ಮೋರಿಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು; ಯುವಕ-ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
- Jan 31
- 1 min read

ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರ ನೀರಕಟ್ಟೆ ಸಮೀಪದ ಕಾಂಚನ ಕ್ರಾಸ್ ಬಳಿ ಶುಕ್ರವಾರ ಭೀಕರ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ಮೋರಿಗೆ ಡಿಕ್ಕಿಯಾಗಿ ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿದ್ದ ಯುವಕ ಮತ್ತು ಯುವತಿ ಸಮಯಪ್ರಜ್ಞೆ ಮೆರೆದು ತಕ್ಷಣ ಹೊರಬಂದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಹಾಸನದಿಂದ ಉಪ್ಪಿನಂಗಡಿ ಕಡೆಗೆ ಸಂಚರಿಸುತ್ತಿದ್ದ ಈ ಕಾರು, ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನ ಮೋರಿಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಂಜಿನ್ ಭಾಗದಲ್ಲಿ ಕಿಡಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿದೆ. ಪ್ರಾಣಭಯದಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡಲೇ ಕೆಳಗಿಳಿದಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರಿನ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅಷ್ಟರಲ್ಲಾಗಲೇ ಕಾರಿನ ಮುಂಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಪ್ರಸ್ತುತ ಈ ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹಳೆಯ ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ಇರುವುದರಿಂದ ಚಾಲಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.







Comments