ನಾಳೆಯಿಂದ ರಾಜ್ಯದ್ಯಂತ ‘ದ್ವಿತೀಯ ಪಿಯುಸಿ’ ಪರೀಕ್ಷೆ ಆರಂಭ: ಈ ನಿಯಮ ಪಾಲನೆ ಕಡ್ಡಾಯ
- Feb 27
- 1 min read

ಬೆಂಗಳೂರು, ಫೆ.27: ರಾಜ್ಯಾದ್ಯಂತ ನಾಳೆಯಿಂದ (ಫೆ.28) ದ್ವಿತೀಯ ಪಿಯುಸಿ ಪರೀಕ್ಷೆ-1 ಆರಂಭಗೊಳ್ಳಲಿದೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಈ ಬಾರಿ ರಾಜ್ಯದಾದ್ಯಂತ ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪಾರದರ್ಶಕತೆ ಹಾಗೂ ಶಿಸ್ತಿನ ದೃಷ್ಟಿಯಿಂದ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಿಸಿಟಿವಿ ಹಾಗೂ ವೆಬ್‌ಕಾಸ್ಟಿಂಗ್ ಮೂಲಕ ನಿಗಾ
ಪರೀಕ್ಷಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ನೇರ ವೆಬ್‌ಕಾಸ್ಟಿಂಗ್ ಮೂಲಕ ಮೇಲ್ವಿಚಾರಣೆ ನಡೆಯಲಿದೆ. ಪರೀಕ್ಷಾ ಕೊಠಡಿಗಳಲ್ಲಿನ ಎಲ್ಲಾ ಚಟುವಟಿಕೆಗಳ ಮೇಲೂ ಅಧಿಕಾರಿಗಳು ಕಣ್ಣಿಟ್ಟಿರಲಿದ್ದಾರೆ.
ಫಲಿತಾಂಶ ಏಪ್ರಿಲ್ 7ಕ್ಕೆ ಸಾಧ್ಯತೆ
ಪರೀಕ್ಷೆ-1 ರ ಫಲಿತಾಂಶವು ಏಪ್ರಿಲ್ 7ರಂದು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳಿಗೆ ಕಡ್ಡಾಯ ಸೂಚನೆಗಳು
1. ಪ್ರವೇಶ ಪತ್ರ ಕಡ್ಡಾಯ:
ಮೂಲ ಪ್ರವೇಶ ಪತ್ರ (Original Hall Ticket) ಇಲ್ಲದೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿಲ್ಲ. ಜೊತೆಗೆ ಫೋಟೋ ಇರುವ ಗುರುತಿನ ಚೀಟಿ ಇಟ್ಟುಕೊಳ್ಳುವುದು ಉತ್ತಮ.
2. ಸಮಯ ಪಾಲನೆ:
ಪರೀಕ್ಷೆ ಆರಂಭವಾಗುವ ಕನಿಷ್ಠ 30 ನಿಮಿಷಗಳ ಮೊದಲು ಕೇಂದ್ರದಲ್ಲಿ ಹಾಜರಾಗಬೇಕು. ಪರೀಕ್ಷೆ ಆರಂಭವಾದ 15 ನಿಮಿಷಗಳ ನಂತರ ಬರುವವರಿಗೆ ಪ್ರವೇಶ ನೀಡಲಾಗುವುದಿಲ್ಲ.
3. ನಿಷೇಧಿತ ವಸ್ತುಗಳು:
ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಇಯರ್‌ಫೋನ್, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಅನುಮತಿ ಇಲ್ಲದ ಕ್ಯಾಲ್ಕುಲೇಟರ್ ತರಲು ಕಟ್ಟುನಿಟ್ಟಿನ ನಿಷೇಧ. ಯಾವುದೇ ಚೀಟಿಗಳು ಅಥವಾ ಪಠ್ಯಪುಸ್ತಕದ ಹಾಳೆಗಳು ಪತ್ತೆಯಾದರೆ ಡಿಬಾರ್ (Debar) ಮಾಡಲಾಗುತ್ತದೆ.
4. ಸಮವಸ್ತ್ರ ಕಡ್ಡಾಯ:
ಕಾಲೇಜಿನ ನಿಗದಿತ ಸಮವಸ್ತ್ರ ಧರಿಸಬೇಕು. ಸಮವಸ್ತ್ರ ಇಲ್ಲದಿದ್ದರೆ ಸಭ್ಯ ಉಡುಪಿನಲ್ಲಿ ಬರಬೇಕು.
5. ಪಾರದರ್ಶಕ ನೀರಿನ ಬಾಟಲಿ:
ಪರೀಕ್ಷಾ ಕೊಠಡಿಯಲ್ಲಿ ಪಾರದರ್ಶಕ ನೀರಿನ ಬಾಟಲಿಯನ್ನು ಮಾತ್ರ ಅನುಮತಿಸಲಾಗುತ್ತದೆ.
6. ಲ್ಯಾಮಿನೇಷನ್ ಬೇಡ:
ಪ್ರವೇಶ ಪತ್ರವನ್ನು ಲ್ಯಾಮಿನೇಟ್ ಮಾಡಬಾರದು. ಮೇಲ್ವಿಚಾರಕರು ದಿನನಿತ್ಯ ಸಹಿ ಮಾಡುವ ಕಾರಣದಿಂದ ಲ್ಯಾಮಿನೇಷನ್ ಮಾಡಬೇಡಿ
ವಿದ್ಯಾರ್ಥಿಗಳಿಗೆ ಸಿಹಿಸುದ್ದಿ
ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ ತೋರಿಸಿ Karnataka State Road Transport Corporation (KSRTC) ಮತ್ತು Bangalore Metropolitan Transport Corporation (BMTC) ಬಸ್‌ಗಳಲ್ಲಿ ಪರೀಕ್ಷಾ ಕೇಂದ್ರದವರೆಗೆ ಉಚಿತವಾಗಿ ಪ್ರಯಾಣಿಸಬಹುದು.






Comments