ಪೆರ್ನೆಯಲ್ಲಿ ಬಾವಿಗೆ ಮಕ್ಕಳನ್ನೆಸೆದ ಕ್ರೂರ ಘಟನೆ; ಆರೋಪಿ ನೂರುನ್ನಿಸಾಗೆ 15 ದಿನ ನ್ಯಾಯಾಂಗ ಬಂಧನ

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಪೆರ್ನೆ ಮೈರಕಟ್ಟೆಯಲ್ಲಿ ಕೌಟುಂಬಿಕ ಕಲಹದ ಬಳಿಕ ಇಬ್ಬರು ಪುಟ್ಟ ಮಕ್ಕಳನ್ನು ತೆರೆದ ಬಾವಿಗೆ ಎಸೆದ ಆರೋಪದ ಪ್ರಕರಣದಲ್ಲಿ ನೂರುನ್ನಿಸಾಳಿಗೆ ಪುತ್ತೂರು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮೊಬೈಲ್ ಫೋನ್ ವಿಚಾರವಾಗಿ ಪತಿ ಸಿನಾನ್ ಜೊತೆ ವೈವಾಹಿಕ ಕಲಹ ಉಂಟಾದ ಬಳಿಕ ನೂರುನ್ನಿಸಾ ಆಕ್ರೋಶಗೊಂಡಿದ್ದಳು ಎನ್ನಲಾಗಿದೆ. ಬಳಿಕ ತನ್ನ ಮೂರೂವರೆ ವರ್ಷದ ಮಗಳು ಹಾಗೂ ಗಂಡನ ತಂಗಿಯ ಮೂರು ವರ್ಷದ ಪುತ್ರ ರಬೀಜ್‌ನನ್ನು ಮನೆಯ ಸಮೀಪದ ಬಾವಿಗೆ ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಚೀರಾಟ ಕೇಳಿದ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಾವಿಯಿಂದ ಮೇಲಕ್ಕೆತ್ತಿದರು. ಆದರೆ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ರಬೀಜ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನೂರುನ್ನಿಸಾಳ ಮಗು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಘಟನೆಯ ಬಳಿಕ ಮನೆಯಲ್ಲೇ ಇದ್ದ ನೂರುನ್ನಿಸಾಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. BNS ಕಾಯ್ದೆಯಡಿ ಕೊಲೆ ಹಾಗೂ ಕೊಲೆ ಯತ್ನದ ಪ್ರಕರಣ ದಾಖಲಿಸಿ, ಸೆಪ್ಟೆಂಬರ್ 20ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.







Comments