ಪಂಚಮಸಾಲಿ ಸ್ವಾಮೀಜಿಗೆ ಲೈಂಗಿಕ ಕಿರುಕುಳ ಆರೋಪ: ₹3 ಕೋಟಿ ಬ್ಲ್ಯಾಕ್‌ಮೇಲ್ ಆರೋಪದ ಪ್ರತಿದೂರು
- Apr 8
- 1 min read

ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಯ ವಿರುದ್ಧ ಗಂಭೀರ ಲೈಂಗಿಕ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್ ಆರೋಪಗಳು ಕೇಳಿಬಂದಿದ್ದು, ಪ್ರಕರಣವು ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಒಬ್ಬ ಮಹಿಳೆ ರಾಜ್ಯ ಮಹಿಳಾ ಆಯೋಗಕ್ಕೆ ನೀಡಿದ ದೂರಿನಲ್ಲಿ, ಸ್ವಾಮೀಜಿ ತಮ್ಮನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದು, ಖಾಸಗಿ ವಿಡಿಯೋಗಳನ್ನು ಬಿಡುಗಡೆ ಮಾಡುವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಮಾನವ ಹಕ್ಕು ಆಯೋಗಕ್ಕೂ ದೂರು ಸಲ್ಲಿಸಲಾಗಿದೆ.
ಮಹಿಳೆಯ ಹೇಳಿಕೆಯ ಪ್ರಕಾರ, ಎರಡು-ಮೂರು ವರ್ಷಗಳ ಹಿಂದೆ Snapchat ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ವಾಮೀಜಿಯೊಂದಿಗೆ ಪರಿಚಯವಾಗಿದ್ದು, ನಂತರ ಫೋನ್ ಕರೆಗಳು ಮತ್ತು ಚಾಟ್ ಮೂಲಕ ಸಂಪರ್ಕ ಮುಂದುವರಿದಿತ್ತು. ಬಳಿಕ ‘ಪ್ರಸಾದ’ ನೀಡುವ ನೆಪದಲ್ಲಿ ಮಠಕ್ಕೆ ಕರೆಯಿಸಿಕೊಂಡು ಅಸಭ್ಯವಾಗಿ ವರ್ತನೆ ನಡೆಸಿ, ಅಶ್ಲೀಲ ಪದಗಳನ್ನು ಬಳಸಿ, ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಘಟನೆಯ ವೇಳೆ ಮಹಿಳೆಗೆ ತಿಳಿಯದೆ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದ್ದು, ಅವುಗಳನ್ನು ಬಳಸಿ ನಂತರ ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ರಾತ್ರಿ ವೇಳೆ ನಗ್ನ ವಿಡಿಯೋ ಕಾಲ್ ಮಾಡಲು ಒತ್ತಾಯಿಸಿದ್ದು, ಪಾಲಿಸದಿದ್ದರೆ ಆ ವಿಡಿಯೋಗಳನ್ನು ಗಂಡ, ಕುಟುಂಬ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಕೆ ಹಾಕಿದ್ದಾರಂತೆ.
ಈ ನಿರಂತರ ಕಿರುಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳೆ, ಬಳಿಕ ಗಂಡನಿಗೆ ವಿಷಯ ತಿಳಿಸಿ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆಗೆ ಅಗತ್ಯವಾದ ಕಾಲ್ ರೆಕಾರ್ಡ್ ಸೇರಿದಂತೆ ಸಾಕ್ಷ್ಯಗಳನ್ನು ನೀಡಲು ತಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ, ಏಪ್ರಿಲ್ 4ರಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.

ತಮ್ಮ ದೂರಿನಲ್ಲಿ, ಮಹಿಳೆ ಮತ್ತು ಇನ್ನೂ ಕೆಲವರು ಸೇರಿ ₹3 ಕೋಟಿ ಹಣಕ್ಕಾಗಿ ಬೆದರಿಕೆ ಹಾಕಿದ್ದು, ಹಣ ನೀಡಲು ನಿರಾಕರಿಸಿದಾಗ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆ ಮಹಿಳೆ ಲಿಂಗಾಯತ ಸಮುದಾಯದವಳು ಎಂದು ಹೇಳಿಕೊಂಡು ಅನಾಥ ಮಕ್ಕಳಿಗಾಗಿ ಟ್ರಸ್ಟ್ ನಡೆಸುತ್ತಿದ್ದೇವೆಂದು ಪರಿಚಯಿಸಿಕೊಂಡು ಆರ್ಥಿಕ ಸಹಾಯ ಕೇಳಿದ್ದಳು ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ಹಣ ನೀಡಲು ನಿರಾಕರಿಸಿದ ನಂತರ, ಫೆಬ್ರವರಿ 11ರಂದು ವಿಜಯಪುರದಿಂದ ಮಠಕ್ಕೆ ಬರುತ್ತಿದ್ದಾಗ ತಮ್ಮ ವಾಹನವನ್ನು ಅಡ್ಡಗಟ್ಟಿ ಹಣ ಬೇಡಿಕೆ ಇಟ್ಟು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಪ್ರಚಾರ ಮಾಡಲಾಗುತ್ತಿದೆ. ಪಂಚಮಸಾಲಿ ಮೀಸಲು ಹೋರಾಟವನ್ನು ದುರ್ಬಲಗೊಳಿಸಲು ರಾಜಕೀಯ ಶಕ್ತಿಗಳ ಕೈವಾಡವೂ ಇದರಲ್ಲಿ ಇದೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ಪ್ರಸ್ತುತ ಎರಡು ಪಕ್ಷಗಳ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.







Comments