ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಕೆಕೆಆರ್‌ಟಿಸಿ ಬಸ್ ಪ್ರಯಾಣ: ಪ್ರಯಾಣಿಕರ ಆತಂಕ
- Jul 5
- 1 min read

ಚಿಂಚೋಳಿ ಘಟಕದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಬಸ್ಸೊಂದನ್ನು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಓಡಿಸುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಲಬುರಗಿಯಿಂದ ಚಿಂಚೋಳಿಗೆ ಬರುತ್ತಿದ್ದ ಬಸ್ಸಿನ ಹೆಡ್‌ಲೈಟ್ ತೀರಾ ಮಂದವಾಗಿದ್ದರಿಂದ, ಚಾಲನೆಗೆ ಬೆಳಕು ಸಾಲದೆ ನಿರ್ವಾಹಕರು ಮೊಬೈಲ್ ಟಾರ್ಚ್ ಹಿಡಿದು ಚಾಲಕನಿಗೆ ದಾರಿ ತೋರಿಸಿದ್ದಾರೆ. ಈ ಅಪಾಯಕಾರಿ ಪ್ರಯಾಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿದೆ.
ರಾತ್ರಿ 7.30ಕ್ಕೆ ಕಲಬುರಗಿಯಿಂದ ಹೊರಟ ಈ ಬಸ್ ತಡರಾತ್ರಿ ಚಿಂಚೋಳಿ ತಲುಪಿದ್ದು, ಆ ಸಮಯದಲ್ಲಿ ಬಸ್ಸಿನಲ್ಲಿ ಒಟ್ಟು 8 ಜನ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳಿಂದಲೂ ಈ ಬಸ್ ಇದೇ ದುಃಸ್ಥಿತಿಯಲ್ಲಿ ಸಂಚರಿಸುತ್ತಿರುವುದಾಗಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಜೀವದ ಜೊತೆ ಸಾರಿಗೆ ಸಂಸ್ಥೆ ಚೆಲ್ಲಾಟವಾಡುತ್ತಿದೆ ಎಂದು ಜನರು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಘಟಕ ವ್ಯವಸ್ಥಾಪಕ ಸುರೇಶ ತೇಗಲತಿಪ್ಪಿ, "ಬಸ್ಸಿನ ಹೆಡ್‌ಲೈಟ್ ತಂತಿಗಳ ಜೋಡಣೆಯಲ್ಲಿ ದೋಷವಿದ್ದುದನ್ನು ಸರಿಪಡಿಸಲಾಗಿತ್ತು. ಆದರೂ ಶನಿವಾರ ಲೈಟ್‌ಗಳು ಬೆಳಗದ ಕಾರಣ ಮೊಬೈಲ್ ಟಾರ್ಚ್ ಬಳಸಿರುವುದು ಗಮನಕ್ಕೆ ಬಂದಿದೆ. ಸಂಸ್ಥೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, ನಾಳೆಯಿಂದಲೇ ಈ ಬಸ್ ಬದಲಿಸಿ ಬೇರೆ ಬಸ್ ಕಾರ್ಯಾಚರಣೆಗೆ ಇಳಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ.







Comments