ಉಳ್ಳಾಲ ಸಮೀಪದ ಕೊಲ್ಯದಲ್ಲಿ ದುರಂತ: ಲೂಡೊ ಕಾಯಿನ್ ನುಂಗಿ 8 ವರ್ಷದ ಬಾಲಕಿ ಸಾವು

ದಕ್ಷಿಣ ಕನ್ನಡ :ಜಿಲ್ಲೆಯ Ullal ತಾಲೂಕಿನ ತೊಕ್ಕಟ್ಟು ಸಮೀಪದ ಕೊಲ್ಯ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದೆ. ಲೂಡೊ ಆಟದ ವೇಳೆ ಪ್ಲಾಸ್ಟಿಕ್ ಕಾಯಿನ್ ನುಂಗಿದ ಪರಿಣಾಮ ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಮೃತ ಬಾಲಕಿಯನ್ನು ತನುಷ್ಕಾ (8) ಎಂದು ಗುರುತಿಸಲಾಗಿದೆ. ಆಕೆ ಮೂಲತಃ Kasaragod district ಜಿಲ್ಲೆಯ ಮಧೂರು ಬಳಿಯ ತಡಕಲ್ ನಿವಾಸಿಗಳಾದ ರಾಜೇಶ್ ಶೆಟ್ಟಿ ಹಾಗೂ ರಾಜೇಶ್ವರಿ ದಂಪತಿಯ ಪುತ್ರಿ. ರಾಜೇಶ್ವರಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಕುಟುಂಬ ಸಮೇತ ಕೊಲ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಹೇಗೆ ನಡೆದಿದೆ ಘಟನೆ?
ಶನಿವಾರ ಸಂಜೆ ತನುಷ್ಕಾ ತನ್ನ ಸಹೋದರ ಮತ್ತು ಸಹೋದರಿಯೊಂದಿಗೆ ಮನೆಯಲ್ಲಿ ಲೂಡೊ ಆಟವಾಡುತ್ತಿದ್ದಳು. ಈ ವೇಳೆ ಆಟದಲ್ಲಿ ಬಳಸುವ ಶಂಕು ಆಕಾರದ ಸಣ್ಣ ಪ್ಲಾಸ್ಟಿಕ್ ಕಾಯಿನ್ ಅನ್ನು ಆಕೆ ಅಜಾಗರೂಕತೆಯಿಂದ ಬಾಯಿಗೆ ಹಾಕಿಕೊಂಡು ನುಂಗಿದ್ದಾಳೆ ಎಂದು ತಿಳಿದುಬಂದಿದೆ. ಕೆಲವೇ ಕ್ಷಣಗಳಲ್ಲಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡು, ಆಕೆ ಅಸ್ವಸ್ಥಳಾಗಿದ್ದಳು.
ತಕ್ಷಣ ಕುಟುಂಬಸ್ಥರು ಮತ್ತು ಸ್ಥಳೀಯರ ನೆರವಿನಿಂದ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.
ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆ
ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕೋನ್ ಸಿಲುಕಿರುವುದು ಪತ್ತೆಯಾಗಿದೆ. ಉಸಿರುಗಟ್ಟುವಿಕೆಯೇ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸ್ ಪರಿಶೀಲನೆ
ಉಳ್ಳಾಲ ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







Comments