ಮುಂಗಾರು ಮುನ್ನ ಮಂಗಳೂರು ಸಜ್ಜು - ಭಾರೀ ಮಳೆ ಎದುರಿಸಲು ಜಿಲ್ಲಾಡಳಿತದ ಭರದ ಸಿದ್ಧತೆ

ಮುಂಗಾರು ಮಳೆಗಾಲದ ಸಿದ್ಧತೆಯ ಭಾಗವಾಗಿ ಜಿಲ್ಲಾಡಳಿತ ಸಮಗ್ರ ಯೋಜನೆಗಳನ್ನು ರೂಪಿಸಿದೆ. ವಿಕೇಂದ್ರೀಕೃತ ವ್ಯವಸ್ಥೆಯಡಿ ಪ್ರತಿ ಗ್ರಾಮ ಪಂಚಾಯತ್ ಮತ್ತು ವಾರ್ಡ್‌ಗಳಿಗೆ ಇನ್ಸಿಡೆಂಟ್ ಕಮಾಂಡರ್‌ಗಳನ್ನು ನೇಮಿಸಿ, ತುರ್ತು ಕಾರ್ಯಗಳಿಗೆ ತಲಾ 30,000 ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ 24/7 ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಅಗ್ನಿಶಾಮಕ ದಳ ಮತ್ತು ಹೆದ್ದಾರಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗಿದೆ.
ಅಪಾಯಕಾರಿ ಮರಗಳ ತೆರವು, ಚರಂಡಿಗಳ ಹೂಳು ತೆಗೆಯುವುದು ಹಾಗೂ ಅಸುರಕ್ಷಿತ ಕಟ್ಟಡಗಳ ದುರಸ್ತಿಗೆ ಆದ್ಯತೆ ನೀಡಲಾಗಿದೆ. ಕಡಲತೀರಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಗೃಹರಕ್ಷಕ ದಳವನ್ನು ನಿಯೋಜಿಸಲಾಗಿದ್ದು, ಪ್ರವಾಹ ಹಾಗೂ ಭೂಕುಸಿತದಂತಹ ಅನಿರೀಕ್ಷಿತ ಪರಿಸ್ಥಿತಿಗಳನ್ನು ನಿಭಾಯಿಸಲು ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಸನ್ನದ್ಧವಾಗಿಡಲಾಗಿದೆ.

ವಿದ್ಯುತ್ ವ್ಯತ್ಯಯ ತಡೆಯಲು ಮೆಸ್ಕಾಂಗೆ ಸೂಚನೆ ನೀಡಲಾಗಿದ್ದು, ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಅಪಾಯಕಾರಿ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.







Comments