ಮಂಗಳೂರು ಕಾಲೇಜು ಕ್ಯಾಂಪಸ್‌ಗೆ ಗಾಂಜಾ ತಂದಿದ್ದ ಮೂವರು ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ; ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು

ಮಂಗಳೂರು, ಆ.5: ಖಾಸಗಿ ಕಾಲೇಜಿನ ಕ್ಯಾಂಪಸ್‌ಗೆ ಗಾಂಜಾ ತಂದಿದ್ದ ಮೂವರು ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ಮಂಗಳೂರಿನಲ್ಲಿ ನಡೆದಿದೆ.

ಕಾಲೇಜು ಆಡಳಿತ ಮಂಡಳಿ ನಡೆಸಿದ ತಪಾಸಣೆಯ ವೇಳೆ ವಿದ್ಯಾರ್ಥಿಗಳ ಬಳಿ ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಸುಮಾರು 290 ಗ್ರಾಂ ಗಾಂಜಾ ಪತ್ತೆಯಾಗಿದೆ. ಕೂಡಲೇ ಕಾಲೇಜು ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಮೂವರೂ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ವಿದ್ಯಾರ್ಥಿಗಳ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆಯ ಸೆಕ್ಷನ್ 27(ಬಿ) (ಮಾದಕ ದ್ರವ್ಯ ಸೇವನೆ) ಹಾಗೂ ಸೆಕ್ಷನ್ 8(ಸಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಗಾಂಜಾ ತಂದಿದ್ದಾರೆ ಎನ್ನಲಾದ ಪ್ರಮುಖ ವಿದ್ಯಾರ್ಥಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನ ಶೈಕ್ಷಣಿಕ ಹಿನ್ನೆಲೆ ಹಾಗೂ ವಶಪಡಿಸಿಕೊಳ್ಳಲಾದ ಗಾಂಜಾದ ಪ್ರಮಾಣವನ್ನು ಪರಿಗಣಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇದೇ ವೇಳೆ, ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.







Comments