ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ಸಂಚರಿಸುವ ಎಲ್ಲಾ ವಿಮಾನ ರದ್ದು

ಮಂಗಳೂರು: ಅಮೆರಿಕ ಹಾಗೂ ಇಸ್ರೇಲ್ ದಾಳಿಗಳ ನಂತರ ಇರಾನ್ ತನ್ನ ಆಗಸದಲ್ಲಿ ನಾಗರಿಕ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಿರುವ ಪರಿಣಾಮ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ಹಾಗೂ ಅಲ್ಲಿಂದ ಮಂಗಳೂರಿಗೆ ಆಗಮಿಸುವ ಹಲವು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ಗಂಭೀರ ವ್ಯತ್ಯಯ ಉಂಟಾಗಿದೆ.
ದುಬೈಗೆ ತೆರಳುತ್ತಿದ್ದ ವಿಮಾನ ಹಿಂತಿರುಗು
ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಐಎಕ್ಸ್ 831 (IXE–DXB) ವಿಮಾನವು ಮಧ್ಯಾಹ್ನ 3 ಗಂಟೆಗೆ ಹಾರಾಟಕ್ಕಾಗಿ ರನ್‌ವೇ ಕಡೆಗೆ ಚಲಿಸಿತ್ತು. ಇದೇ ವೇಳೆ ಇರಾನ್ ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ, ವಿಮಾನವನ್ನು ಮರು ನಿಲ್ದಾಣಕ್ಕೆ ಕರೆಸಿಕೊಳ್ಳಲಾಯಿತು.
ಆ ವಿಮಾನದಲ್ಲಿ 174 ಮಂದಿ ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿ ಇದ್ದರು ಎಂದು ವಿಮಾನ ನಿಲ್ದಾಣದ ಮೂಲಗಳು ದೃಢಪಡಿಸಿವೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಟರ್ಮಿನಲ್‌ಗೆ ಕರೆತಂದು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.
ಅನೇಕ ಅಂತಾರಾಷ್ಟ್ರೀಯ ಹಾರಾಟಗಳಲ್ಲಿ ವ್ಯತ್ಯಯ
ಕೆಲವು ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಹಾಗೂ ಕೆಲ ಅಂತಾರಾಷ್ಟ್ರೀಯ ಹಾರಾಟಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಿರುವುದರಿಂದ, ಮಂಗಳೂರು ಮೂಲಕ ಸಂಚರಿಸುವ ಹಲವು ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಕಂಡುಬಂದಿದೆ.
ಕೆಲವು ವಿಮಾನಗಳು ಸಂಪೂರ್ಣವಾಗಿ ರದ್ದಾಗಿದ್ದರೆ, ಇನ್ನೂ ಕೆಲವು ವಿಮಾನಗಳನ್ನು ನಿಗದಿತ ಗಮ್ಯಸ್ಥಾನದ ಬದಲು ಪರ್ಯಾಯ ವಿಮಾನ ನಿಲ್ದಾಣಗಳಲ್ಲಿ ಇಳಿಸಲಾಗಿದೆ. ಕೆಲವು ವಿಮಾನಗಳು ನಿಗದಿತ ಸಮಯಕ್ಕಿಂತ ವಿಳಂಬವಾಗಿ ತಲುಪುವ ಸಾಧ್ಯತೆಯೂ ಇದೆ.
ಪ್ರಯಾಣಿಕರಿಗೆ ಮಹತ್ವದ ಸೂಚನೆ
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಲು ಉದ್ದೇಶಿಸಿರುವ ಪ್ರಯಾಣಿಕರು ತಮ್ಮ ವಿಮಾನಗಳ ಇತ್ತೀಚಿನ ಹಾರಾಟದ ಸ್ಥಿತಿಯನ್ನು ಸಂಬಂಧಿತ ವಿಮಾನ ಕಂಪನಿಗಳೊಂದಿಗೆ ಪರಿಶೀಲಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಅವಲಂಬಿಸಿ ಮುಂದಿನ ದಿನಗಳಲ್ಲಿ ಹಾರಾಟಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.







Comments