ಮಾಟ-ಮಂತ್ರದ ಹೆಸರಲ್ಲಿ ಮಹಿಳೆಗೆ ಕಿರುಕುಳದ ಆರೋಪ; ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಸತೀಶ್ ಪಾತ್ರಿ ಈಗ ಪೊಲೀಸರ ಕೈಗೆ!

ಚಿಕ್ಕಮಗಳೂರು: ಮಾಟ-ಮಂತ್ರ, ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರನ್ನು ನಂಬಿಸಿ, ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಬೇಕಾಗಿದ್ದ ಸತೀಶ್ ಪಾತ್ರಿ ಎಂಬಾತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ಹಾಸನ ಮೂಲದ ಮಹಿಳೆಯನ್ನು ಕೊಪ್ಪ ತಾಲೂಕಿನ ಮೇಕನಹಾಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪದ ಪ್ರದೇಶಕ್ಕೆ ಹಾಗೂ ತೀರ್ಥಹಳ್ಳಿಯ ಕುದುರೆಗುಂಡಿ ಭಾಗಕ್ಕೆ ಕರೆದುಕೊಂಡು ಹೋಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಮಾಟ-ಮಂತ್ರ, ದೆವ್ವ ಬಿಡಿಸುವ ಹೆಸರಿನಲ್ಲಿ ಹೀಗೆ ಮಹಿಳೆಯನ್ನು ಬೇರೆ ಬೇರೆ ಕಡೆಗಳಿಗೆ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಇದೀಗ ಪ್ರಕರಣಕ್ಕೆ ಮತ್ತೊಂದು ತಿರುವು ಕೊಟ್ಟಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರ ಬಂಧನದ ಭೀತಿ ಶುರುವಾಗಿದ್ದು, ಅಷ್ಟರಲ್ಲಿ ಸತೀಶ್ ಪಾತ್ರಿ ಅಲ್ಲಿಂದ ಎಸ್ಕೇಪ್ ಆಗಿದ್ದ ಎನ್ನಲಾಗಿದೆ. ಒಂದು ದಿನ, ಎರಡು ದಿನ ಅಲ್ಲ... ಬರೋಬ್ಬರಿ ಒಂದು ತಿಂಗಳಿನಿಂದ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ನಾಪತ್ತೆಯಾಗಿದ್ದ ಎಂದು ತಿಳಿದುಬಂದಿದೆ.
ಆದ್ರೆ ಕೇಸ್ ಅಲ್ಲಿ ನಿಂತಿಲ್ಲ. ಪೊಲೀಸರು ಆರೋಪಿಯ ಪತ್ತೆಗೆ ಮುಂದುವರಿದಿದ್ದು, ಕೊನೆಗೂ ಬೆಂಗಳೂರಿನಲ್ಲಿ ಸತೀಶ್ ಪಾತ್ರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.
ಇನ್ನು ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಿದ್ದು, ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







Comments