ಜೈಲಿನಲ್ಲಿದ್ದ ಪ್ರಿಯಕರನನ್ನು ಹೊರತರಲು ಡ್ರಗ್ಸ್ ಸಾಗಾಟಕ್ಕೆ ಇಳಿದ ಯುವತಿ! ರೈಲ್ವೆ ನಿಲ್ದಾಣದಲ್ಲೇ ಲಾಕ್

ವಿಜಯವಾಡ: ಜೈಲಿನಲ್ಲಿದ್ದ ಪ್ರಿಯಕರನನ್ನು ಜಾಮೀನಿನ ಮೇಲೆ ಹೊರತರಬೇಕು... ಆದರೆ ಕೈಯಲ್ಲಿ ಹಣವಿಲ್ಲ. ಇದೇ ಟೈಮಲ್ಲಿ ಬಂದಿದ್ದು ಕಮಿಷನ್ ಆಫರ್. ಪಾಪ, ಹಣದ ಆಸೆಗೆ ಡ್ರಗ್ಸ್ ಸಾಗಾಟಕ್ಕೆ ಇಳಿದ ಯುವತಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ !
ವಿಜಯವಾಡ ರೈಲ್ವೆ ನಿಲ್ದಾಣದಲ್ಲಿ ಈಗಲ್ ಹಾಗೂ ಜಿಆರ್‌ಪಿ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 110 ಗ್ರಾಂ ಎಂಡಿಎಂಎ (MDMA) ಸಾಗಿಸುತ್ತಿದ್ದ ನಾಗಸೌಮ್ಯ ಎಂಬ ಯುವತಿಯನ್ನು ಬಂಧಿಸಿದ್ದಾರೆ. ಈಕೆಗೆ ಡ್ರಗ್ಸ್ ಸಾಗಾಟಕ್ಕೆ ಆಮಿಷವೊಡ್ಡಿದ್ದಾನೆ ಎನ್ನಲಾದ ಬಷೀರ್ ಎಂಬಾತನನ್ನೂ ಪೊಲೀಸರು ಬಳಿಕ ಬಂಧಿಸಿದ್ದಾರೆ.
ವಿಜಯವಾಡದ ಪಟಮಟ ನಿವಾಸಿ ನಾಗಸೌಮ್ಯಗೆ ಮಾದಕವಸ್ತು ಸೇವನೆಯ ಚಟವಿತ್ತು ಎನ್ನಲಾಗಿದೆ. ಈಕೆಯ ಪ್ರಿಯಕರ ಕಾಶಿವರ್ಧನ್ ಮೂರು ತಿಂಗಳ ಹಿಂದೆ ಡ್ರಗ್ಸ್ ಸಾಗಾಟದ ಪ್ರಕರಣದಲ್ಲಿ ಚಿತ್ತೂರಿನಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ.
ಪ್ರಿಯಕರನನ್ನು ಜಾಮೀನಿನ ಮೇಲೆ ಹೊರತರಲು ಹಣ ಬೇಕಿತ್ತು. ಇದೇ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡ ಕೃಷ್ಣಲಂಕಾದ ಡ್ರಗ್ ಪೆಡ್ಲರ್ ಬಷೀರ್, ಬೆಂಗಳೂರಿನಿಂದ MDMA ತಂದುಕೊಟ್ಟರೆ ₹50 ಸಾವಿರ ಕಮಿಷನ್ ಕೊಡುತ್ತೇನೆ ಎಂದು ಆಮಿಷವೊಡ್ಡಿದ್ದಾನೆ ಎನ್ನಲಾಗಿದೆ.
ಆಫರ್‌ಗೆ ಒಪ್ಪಿದ ಸೌಮ್ಯ ಅಕ್ಟೋಬರ್ 13ರಂದು ಬೆಂಗಳೂರಿನ ಯಲಹಂಕಕ್ಕೆ ತೆರಳಿ ಅಪರಿಚಿತ ವ್ಯಕ್ತಿಯೊಬ್ಬನಿಂದ 110 ಗ್ರಾಂ MDMA ಪಡೆದುಕೊಂಡಿದ್ದಳು ಎನ್ನಲಾಗಿದೆ.
ಇನ್ನು ಪೊಲೀಸರ ಕಣ್ಣಿಗೆ ಬೀಳಬಾರದು ಅಂತ ಡ್ರಗ್ಸ್ ಪೊಟ್ಟಣಗಳನ್ನು ಪ್ಯಾಂಟ್‌ನ ಒಳಭಾಗದಲ್ಲಿ ವಿಶೇಷವಾಗಿ ಹೊಲಿಸಿದ್ದ ಜೇಬಿನಲ್ಲಿ ಅಡಗಿಸಿಕೊಂಡು ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಹತ್ತಿ ವಿಜಯವಾಡದತ್ತ ಹೊರಟಿದ್ದಳು.
ಆದ್ರೆ ... ಪೊಲೀಸರ ಪ್ಲಾನ್ ಬೇರೆನೆ ಇತ್ತು!
ಡ್ರಗ್ಸ್ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಈಗಲ್ ಇನ್ಸ್‌ಪೆಕ್ಟರ್ ರವೀಂದ್ರ ಹಾಗೂ ಜಿಆರ್‌ಪಿ ಇನ್ಸ್‌ಪೆಕ್ಟರ್ ರಮಣ ನೇತೃತ್ವದ ತಂಡ ವಿಜಯವಾಡ ರೈಲ್ವೆ ನಿಲ್ದಾಣದಲ್ಲೇ ಕಾಯುತ್ತಿತ್ತು.
ರೈಲು ವಿಜಯವಾಡ ತಲುಪುತ್ತಿದ್ದಂತೆ ತಪಾಸಣೆ ಶುರುವಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ಸೌಮ್ಯ ಫೋನ್ ಮೂಲಕ ಬಷೀರ್‌ಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ. ಅಷ್ಟರಲ್ಲಿ ನಿಲ್ದಾಣದಲ್ಲಿದ್ದ ಬಷೀರ್ ಅಲ್ಲಿಂದ ಎಸ್ಕೇಪ್ ಆಗಿದ್ದ.
ಆದ್ರೆ ಸೌಮ್ಯ ಮಾತ್ರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಪರಿಶೀಲನೆ ನಡೆಸಿದಾಗ ಪ್ಯಾಂಟ್‌ನ ವಿಶೇಷ ಜೇಬಿನಲ್ಲಿ ಅಡಗಿಸಿಟ್ಟಿದ್ದ 110 ಗ್ರಾಂ MDMA ಪತ್ತೆಯಾಗಿದೆ.
ಬಳಿಕ ತಲೆಮರೆಸಿಕೊಂಡಿದ್ದ ಬಷೀರ್‌ಗಾಗಿ ಹುಡುಕಾಟ ಮುಂದುವರಿಸಿದ ಪೊಲೀಸರು, ಬುಧವಾರ ವಿಜಯವಾಡ ನಗರದಲ್ಲೇ ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಸದ್ಯ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಿಯಕರನನ್ನು ಜೈಲಿನಿಂದ ಹೊರತರಲು ಶುರುವಾದ ಕಸರತ್ತು ಕೊನೆಗೆ ಯುವತಿಯನ್ನೇ ಪೊಲೀಸರ ಕೈಗೆ ತಂದು ನಿಲ್ಲಿಸಿದೆ







Comments