ದಕ್ಷಿಣ ಕನ್ನಡದಲ್ಲಿ ಲಕ್ಕಿ ಸ್ಕೀಮ್ ದಂಧೆ: ಕೋಟ್ಯಂತರ ರೂ. ವಂಚಿಸಿ ಕಚೇರಿ ಬಂದ್!

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದೂವರೆ ವರ್ಷದಿಂದ 'ಲಕ್ಕಿ ಸ್ಕೀಮ್' ಹೆಸರಿನಲ್ಲಿ ನಡೆಯುತ್ತಿದ್ದ ಬೃಹತ್ ವಂಚನೆ ಜಾಲ ಈಗ ಬಯಲಿಗೆ ಬಂದಿದೆ. ಮಂಗಳೂರು, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಹಲವೆಡೆ ತಿಂಗಳಿಗೆ 1,000 ರೂ. ಕಂತಿನಂತೆ ಕಾರು, ಬೈಕ್ ಹಾಗೂ ಚಿನ್ನದ ಆಮಿಷವೊಡ್ಡಿ ಸಾವಿರಾರು ಗ್ರಾಹಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಲಾಗಿತ್ತು. ಸದ್ಯ ಈ ಸಂಸ್ಥೆಗಳು ಕಚೇರಿಗಳನ್ನು ಮುಚ್ಚಿ ಜನರಿಗೆ ಪಂಗನಾಮ ಹಾಕಲು ಸಜ್ಜಾಗಿವೆ.
ತುಳು ಚಿತ್ರರಂಗದ ಸೆಲೆಬ್ರಿಟಿಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ನೀಡಲಾಗಿತ್ತು. ಆದರೆ ಸ್ಕೀಮ್ ಅವಧಿ ಮುಗಿದು 5 ತಿಂಗಳು ಕಳೆದರೂ ಗ್ರಾಹಕರಿಗೆ ಹಣ ಮರಳಿಸಿಲ್ಲ. ಕಚೇರಿಗೆ ಅಲೆಯುತ್ತಿರುವ ಜನರಿಗೆ "ಬ್ಯಾಂಕ್ ಖಾತೆ ಫ್ರೀಜ್ ಆಗಿದೆ" ಎಂಬ ಹಾರಿಕೆ ಉತ್ತರ ನೀಡಲಾಗುತ್ತಿದೆ. ವಂಚಕರು ಸಾರ್ವಜನಿಕರ ಹಣವನ್ನು ಐಷಾರಾಮಿ ಜೀವನಕ್ಕೆ ಬಳಸಿಕೊಂಡಿದ್ದು, ಈಗ ತಮ್ಮ ಜಾಲವನ್ನು ಮಡಿಕೇರಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೂ ವಿಸ್ತರಿಸುತ್ತಿದ್ದಾರೆ.
ಈ ಹಿಂದೆ ನ್ಯೂಶೈನ್ ಹಾಗೂ ವಫಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ 15 ಕೋಟಿ ರೂ. ವಂಚಿಸಿದ ಆರೋಪದಡಿ ಅಹಮದ್ ಖುರೇಶಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಮಾಧ್ಯಮಗಳ ವರದಿ ಆಧಾರದ ಮೇಲೆ ಆರೋಪಿಗಳಿಂದ 5 ಕೋಟಿ ರೂ. ಮೌಲ್ಯದ ಶೂರಿಟಿ ಭೂಮಿಯನ್ನು ಪಡೆದುಕೊಳ್ಳಲಾಗಿದೆ, ಅಧಿಕೃತ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.







Comments