ಕುಕ್ಕೆ ಸುಬ್ರಹ್ಮಣ್ಯಕ್ಕೂ ತಟ್ಟಿದ ಇರಾನ್-ಅಮೆರಿಕ ಯುದ್ಧದ ಬಿಸಿ: ಇಂದಿನಿಂದ ಭಕ್ತರ ಉಪಹಾರದಲ್ಲಿ ಬದಲಾವಣೆ!

ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಅನಿಲ ಪೂರೈಕೆ ವ್ಯತ್ಯಯವು ಇದೀಗ ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ತಟ್ಟಿದೆ. ಗ್ಯಾಸ್ ಕೊರತೆಯಿಂದಾಗಿ ಮಾರ್ಚ್ 11ರ ಬುಧವಾರದಿಂದ ಭಕ್ತರಿಗೆ ನೀಡಲಾಗುವ ಬೆಳಗ್ಗಿನ ಉಪಹಾರದ ಮೆನುವಿನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ನಿತ್ಯ ನೀಡಲಾಗುತ್ತಿದ್ದ ಬಿಸಿಬಿಸಿ ವೈವಿಧ್ಯಮಯ ತಿಂಡಿಗಳ ಬದಲಾಗಿ, ಗ್ಯಾಸ್ ಉಳಿತಾಯ ಮಾಡುವ ಉದ್ದೇಶದಿಂದ ಇಂದಿನಿಂದ ಭಕ್ತರಿಗೆ ಅವಲಕ್ಕಿ ಮತ್ತು ಮೊಸರನ್ನು ವಿತರಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
ಪ್ರಸ್ತುತ ದೇವಸ್ಥಾನದಲ್ಲಿ ಕೇವಲ ಮೂರು ದಿನಗಳಿಗೆ ಸಾಕಾಗುವಷ್ಟು ಮಾತ್ರ ಗ್ಯಾಸ್ ದಾಸ್ತಾನು ಲಭ್ಯವಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಪೂರೈಕೆ ಸಹಜ ಸ್ಥಿತಿಗೆ ಬಾರದಿದ್ದರೆ, ಮಧ್ಯಾಹ್ನದ ಅನ್ನಪ್ರಸಾದ ವಿತರಣೆಯ ಮೇಲೆಯೂ ಇದು ಗಂಭೀರ ಪರಿಣಾಮ ಬೀರಲಿದೆ. ಪರಿಸ್ಥಿತಿಯನ್ನು ನಿಭಾಯಿಸಲು ದೇವಸ್ಥಾನದ ಮಂಡಳಿಯು ಗ್ಯಾಸ್ ಪೂರೈಕೆ ಸಂಸ್ಥೆಗೆ ಪ್ರತಿದಿನ ಕನಿಷ್ಠ 20 ಸಿಲಿಂಡರ್‌ಗಳನ್ನು ತುರ್ತಾಗಿ ಒದಗಿಸುವಂತೆ ಪತ್ರ ಬರೆದಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಭಕ್ತರು ಸಹಕರಿಸಬೇಕೆಂದು ದೇವಸ್ಥಾನದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಗ್ಯಾಸ್ ಅಭಾವ ಮುಂದುವರಿದರೆ ಮಧ್ಯಾಹ್ನದ ಭೋಜನ ಪ್ರಸಾದದಲ್ಲೂ ಬದಲಾವಣೆ ಮಾಡುವ ಬಗ್ಗೆ ಅಧಿಕಾರಿಗಳು ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಯುದ್ಧದ ಭೀತಿಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಇಂಧನ ಬಿಕ್ಕಟ್ಟು ಈಗ ನೇರವಾಗಿ ಧಾರ್ಮಿಕ ಕೇಂದ್ರಗಳ ದೈನಂದಿನ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತಿದೆ. ಈ ಕುರಿತು ಶೀಘ್ರದಲ್ಲೇ ಭಕ್ತರಿಗೆ ಅಧಿಕೃತ ಮಾಹಿತಿಯನ್ನು ನೀಡುವುದಾಗಿ ದೇವಸ್ಥಾನದ ಮೂಲಗಳು ತಿಳಿಸಿವೆ. ಭಕ್ತಾದಿಗಳು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಬೇಕಿದೆ.







Comments