ಕುಕ್ಕೆಗೆ ಬರುತ್ತಿದ್ದ ಬಸ್ ಚಾಲಕನಿಗೆ ಹೃದಯಘಾತ ತನ್ನ ಪ್ರಾಣ ಹೋದರೂ 24 ಮಂದಿ ಪ್ರಯಾಣಿಕರ ಜೀವ ಉಳಿಸಿದ ವೀರ ಚಾಲಕ

ಮಡಿಕೇರಿ ಸಮೀಪದ ಕಾಟಿಕೇರಿಯಲ್ಲಿ ಚಾಲಕ ಶಿವಕುಮಾರ್ ಅವರು ಹೃದಯಾಘಾತದ ನಡುವೆಯೂ ಸಮಯಪ್ರಜ್ಞೆ ಮೆರೆದು 24 ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ಬೆಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ಚಲಾಯಿಸುವಾಗ ತೀವ್ರ ಎದೆನೋವು ಕಾಣಿಸಿಕೊಂಡರೂ, ಎದೆಗುಂದದ ಅವರು ಬಸ್ಸನ್ನು ರಸ್ತೆಯ ಪಕ್ಕದ ಗುಡ್ಡಕ್ಕೆ ಒರಗಿಸಿ ಸುರಕ್ಷಿತವಾಗಿ ನಿಲ್ಲಿಸಿದರು. ಈ ಮೂಲಕ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದು ತಪ್ಪಿದಂತಾಗಿದೆ.

ಬಸ್ಸನ್ನು ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಶಿವಕುಮಾರ್ ಅವರು ಸೀಟಿನಲ್ಲೇ ಕೊನೆಯುಸಿರೆಳೆದಿದ್ದು, ಅವರ ಕರ್ತವ್ಯನಿಷ್ಠೆ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ವಿಷಯ ತಿಳಿದ ಮಡಿಕೇರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡರು. ತನ್ನ ಪ್ರಾಣ ಹೋಗುವ ಹಂತದಲ್ಲೂ ಇತರರ ಜೀವ ಉಳಿಸಲು ಹೋರಾಡಿದ ಈ ಚಾಲಕನ ಸಾಹಸಗಾಥೆ ಈಗ ನಾಡಿನಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.







Comments