ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ದೋಷಿಗಳು; ಸೆ.22ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

ಪುತ್ತೂರು: ಸಂಪ್ಯದಲ್ಲಿ 2019ರ ಸೆಪ್ಟೆಂಬರ್ 3ರಂದು ಗಣೇಶೋತ್ಸವದ ಪೆಂಡಾಲ್‌ನಲ್ಲಿ ನಡೆದಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಮೇಲಿನ ಕೊಲೆ ಆರೋಪಗಳು ಸಾಬೀತಾಗಿವೆ.
ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದು, ಆರೋಪಿಗಳಾದ ಕಿರಣ್ (ಎ3) ಹಾಗೂ ಪ್ರೀತೇಶ್ (ಎ1) ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದೆ. ಇವರಿಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣವನ್ನು ಸೆಪ್ಟೆಂಬರ್ 22ರಂದು ನ್ಯಾಯಾಲಯ ಪ್ರಕಟಿಸಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರೀತೇಶ್, ಆತನ ಸಹೋದರರಾದ ಚರಣ್ ರಾಜ್ ಹಾಗೂ ಕಿರಣ್, ಮತ್ತು ಸ್ಟೀವನ್ ಮೊಂತೇರೊ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ಪ್ರೀತೇಶ್ ಕಾರ್ತಿಕ್‌ಗೆ ಚೂರಿಯಿಂದ ಇರಿದಿದ್ದು, ಚರಣ್ ರಾಜ್ ಹಾಗೂ ಕಿರಣ್ ಕಾರ್ತಿಕ್ ಅವರ ಕೈಗಳನ್ನು ಹಿಡಿದುಕೊಂಡಿದ್ದರು ಎಂಬ ಆರೋಪ ಪ್ರಕರಣದಲ್ಲಿತ್ತು.
ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಎದುರಿಸಿದ್ದ ಸ್ಟೀವನ್ ಮೊಂತೇರೊ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇನ್ನು ಪ್ರಕರಣದ ಎರಡನೇ ಆರೋಪಿ ಚರಣ್ ರಾಜ್ ಅವರನ್ನು 2022ರ ಜೂನ್ 4ರಂದು ಪೆರ್ಲಂಪಾಡಿಯಲ್ಲಿ ಮತ್ತೊಂದು ತಂಡ ತಲ್ವಾರ್‌ನಿಂದ ಹತ್ಯೆ ಮಾಡಿತ್ತು.
ಇದೀಗ ಕಿರಣ್ ಹಾಗೂ ಪ್ರೀತೇಶ್ ವಿರುದ್ಧದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ, ಸೆ.22ರಂದು ಶಿಕ್ಷೆಯ ಪ್ರಮಾಣದ ಕುರಿತು ನ್ಯಾಯಾಲಯದ ತೀರ್ಪು ಹೊರಬೀಳಲಿದೆ.







Comments