Karnataka Rain Alert: ರಾಜ್ಯದಲ್ಲಿ 7 ದಿನ ವರುಣಾರ್ಭಟ – ಗಾಳಿ, ಗುಡುಗು, ಆಲಿಕಲ್ಲು ಮಳೆ ಎಚ್ಚರಿಕೆ

ಗುಡುಗು-ಗಾಳಿ ಜೊತೆ ಭಾರೀ ಮಳೆ, ಉತ್ತರ ಒಳನಾಡಿನಲ್ಲಿ ಆಲಿಕಲ್ಲು ಮಳೆ ಸಾಧ್ಯತೆ; 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ಬಿಸಿಲಿನ ತೀವ್ರತೆಗೆ ತತ್ತರಿಸಿದ್ದ ರಾಜ್ಯದ ಜನತೆಗೆ ಈಗ ಮಳೆ ಶಾಂತಿ ತರಲಿದ್ದು, ಮುಂದಿನ 7 ದಿನಗಳ ಕಾಲ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು-ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ 17 ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಉತ್ತರ ಕನ್ನಡ, ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಇನ್ನೊಂದೆಡೆ, ಉತ್ತರ ಒಳನಾಡು ಕರ್ನಾಟಕದ ಕೆಲವೆಡೆಗಳಲ್ಲಿ 40–50 ಕಿಮೀ ವೇಗದ ಗಾಳಿ ಬೀಸುವ ಜೊತೆಗೆ ಆಲಿಕಲ್ಲು ಮಳೆಯ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮಲೆನಾಡು ಭಾಗಗಳಲ್ಲಿ ಈಗಾಗಲೇ ಮಳೆಯ ತೀವ್ರತೆ ಹೆಚ್ಚಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, 30–40 ಕಿಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನ ಮುಂದುವರಿದಿದ್ದರೂ, ಇಂದು ಮತ್ತು ನಾಳೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಉಷ್ಣತೆಯಲ್ಲಿ ಸ್ವಲ್ಪ ಇಳಿಕೆ ಕಾಣುವ ನಿರೀಕ್ಷೆ ಇದೆ.







Comments